ನೆನಪು

ಮುಸ್ಸಂಜೆಯಲ್ಲಿ ಕರಿ-ಮೋಡಗಳು
ಕವಿದಾಗ ಕಾಡುವುದು ನಿನ್ನ ನೆನಪು

ಗುಡುಗು-ಸಿಡಿಲು-ಮಿಂಚು ಬರಿತ ಮಳೆ
ಬಂದಾಗ ಬರುವುದು ನಿನ್ನ ನೆನಪು

ಧಾರಾಕಾರವಾಗಿ ಸುರಿಯುವ ಮಳೆಯಲ್ಲಿ
ತೊಯ್ದು ನಡುಗುವ ಚಳಿಯಲ್ಲಿ ನಿನ್ನ ನೆನಪು

ಅಂದು ತೆಗೆದುಕೂಂಡು ಹೋದ ನನ್ನ ಛತ್ರಿ
ಹಿಂದಿರುಗಿಸಿಲ್ಲಾ ನಿನಗಿಲ್ಲವೇ ಗೆಳತಿ ನೆನಪು ?ಹುಡುಗಿ ಬೇಕಾಗಿದ್ದಾಳೆ

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೇಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !


ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್ !!

-ಮಲ್ಲಿಕಾರ್ಜುನ ಸಣ್ಣಪ್ಪನವರ sannams@hotmail।com

ಮೂರು ಮತ್ತೊಂದು

ಹೆಂಡತಿ ಮಾಡಿದ ಉಂಡಿ

ತಿಂದು ಕರಗಿಸ
ಬಲ್ಲೆ ಕಲ್ಲಿನ ಬಂಡಿ !
ತಿನ್ನಲಾರೆ ಹೆಂಡತಿ
ಮಾಡಿದ ನುಚ್ಚಿನ ಉಂಡಿ !!

ಮಹಾಕವಿ ಕುವೆಂಪು

ನನ್ನ ಹೆಂಡತಿಯ ಮುಖದ
ಬಣ್ಣ ಇದ್ದಿದ್ದರೆ ಕೆಂಪು !
ನಾನು ಕೂಡ ಆಗುತ್ತಿದ್ದೆ
ಮಹಾಕವಿ ಕುವೆಂಪು !!


ನನ್ನ ಐಶ್ವರ್ಯಾ ರೈ

ನಲ್ಲೆ,
ನಿನ್ನ ರೂಪ-ಲಾವಣ್ಯ
ಹೇಗಿದ್ದರೂ ಸೈ !
ನನ್ನ ಪಾಲಿಗೆ
ನೀನೆ ಐಶ್ವರ್ಯಾ ರೈ !!

ಗಾಂಧಿವಾದ

ಗಂಟಲಲ್ಲಿ ಇಳಿದಾಗ
ಮೂರು ತೊಟ್ಟು ಬ್ರಾಂದಿ
ಮತ್ತಿನಲ್ಲಿ ನಾನಾಗುವೆ
ಮಹಾತ್ಮ ಗಾಂಧಿ

ಹನಿ ಹನಿ ಹನಿ.... ಮೂರು ಹನಿ!


ಚುಂಬನ ಚಳಿಚಳಿ
ತಾಳಲಾರೆ
ನಾನು ಈ
ಚಳಿಗಾಲದ
ಚಳಿಚಳಿ!

ಕೊಡುವೆಯಾ
ನಲ್ಲೆ ನಿನ್ನ ಬಿಸಿ
ಚುಂಬನದ
ಬಳವಳಿ!

ನಿರಾಕರಿಸಬೇಡ
ನನ್ನ ಈ
ಪ್ರೀತಿಯ
ಕಳಕಳಿ!

ನಿರಾಕರಿಸಿದರೆ
ನಾ ಮಾಡುವೆ
ಚುಂಬನಕ್ಕಾಗಿ
ಚಳವಳಿ!

ಮುದ್ದಾದ ಕೊಡೆ

ಚೆಲುವೆಯ ಕೈಯಲ್ಲಿ
ಇತ್ತು ಕಪ್ಪು ಬಣ್ಣದ
ಮುದ್ದಾದ ಕೊಡೆ !

ನಾನಂದೆ ಅವಳ
ಕೊಡೆ ನೋಡಿ
`ಮುದ್ದು ಕೊಡೆ'!

ಸಿಟ್ಟಿನಿಂದ ಕಾರವಾಗಿ
ನೋಡಿದಳು ಅವಳು
ನನ್ನ ಕಡೆ!

ನಾನಂದೆ, ಅಷ್ಟು
ಸಿಟ್ಟಿದ್ದರೆ ನನ್ನ
ಕಪಾಳಕ್ಕೆ ಹೊಡೆ!

ನನ್ನ ಮುಖಕ್ಕೆ
ಬೀಸಾಡಿ ಹೋದಳು
ಅವಳ ಕೊಡೆ!

ಕಾಯುತ್ತಿರುವೆ
ಹಿಂದಿರುಗಿಸಲು
ಅವಳ ಕೊಡೆ!
ಅವಳು ಬಂದಿಲ್ಲಾ
ತಿರುಗಿ ಮತ್ತೆ
ಈ ಕಡೆ!

ದಯವಿಟ್ಟು ಕಳಿಸಿರಿ
ಬಂದರೆ ಅವಳು
ನಿಮ್ಮ ಕಡೆ!

ತಿರುಗಿಸಲೇ ಬೇಕು
ನಾನು ಅವಳ
ಮುದ್ದು ಕೊಡೆ!

ಚೆಲುವೆ


ಹಾಲಿನಂತೆ ಹೊಳಪು
ಅವಳ ಮೈ`ಬಣ್ಣಾ'

ಸಿಂಹದಂತ ನಡುಗೆ
ಅವಳ ನಡು `ಸಣ್ಣಾ'

ಕರಗಿ ಹೋದೆ ಕಂಡು
ಮೀನಿನಂತ ಅವಳ `ಕಣ್ಣಾ'

ಹತ್ತಿರ ಬಂದು ಅಂದಳು
ನೀನೇ ನನ್ನ `ಅಣ್ಣಾ'

ಬಳೆಗಾರ ಚೆನ್ನಯ್ಯ ಬೇಕಾಗಿದ್ದಾನೆ !

"ಪರದೇಶದಲ್ಲಿ ತೌರ ನೆನಪುಗಳು ಸಾಲುಸಾಲಾಗಿ ಕಾಡುತ್ತವೆ. ಅಮೆರಿಕದ ನೆಲಕ್ಕೆ ಸಹಜವಾದ ಸೋಡಾಟೀಟಿಗಳ ಕಂಡಾಗ ಬಳೆಗಾರ ಚೆನ್ನಯ್ಯ ನೆನಪಾಗುತ್ತಾನೆ. ದಂಪತಿಗಳ ಮುನಿಸು ಕಳೆವ ಈ ಸಂಧಾನಕಾರ ಚೆನ್ನಯ್ಯನ ಅಗತ್ಯದಾಂಪತ್ಯಕ್ಕಷ್ಟೇ ಅಲ್ಲ , ಏಕಾಂತದ ನೆನಪುಗಳಿಗೂ ಬೇಕು".ಬೆಳಗ್ಗೆ ಎದ್ದು ಆಫೀಸು ತಲುಪುವುದರಲ್ಲಿ ಒಂಭತ್ತು ಗಂಟೆ ಹೊಡೆದಿರುತ್ತೆ !!! ಒಂದು ದಿವಸವಾದರೂ ನಮ್ಮ ಮ್ಯಾನೇಜರ್ ಮಾರ್ಕ್‌ಗಿಂತ ಮುಂಚೆ ಆಫೀಸು ತಲುಪಬೇಕೆಂಬ ನನ್ನ ಕನಸು ಇನ್ನೂ ಕನಸಾಗೇ ಉಳಿದಿದೆ. ಅವನು ಆಫೀಸಿಗೆ ಬರುವುದು ೬ ಗಂಟೆಗೆ, ಆ ಹೊತ್ತಿಗೆ ನಾನಿನ್ನೂ ನಿದ್ರಾದೇವತೆಯ ಸಂಪೂರ್ಣ ವಶದಲ್ಲಿರುತ್ತೇನೆ. ಸುಮಾರು ಅಮೆರಿಕನ್ನರು ಕೆಲಸಕ್ಕೆ ಮುಂಜಾನೆ ಬಹು ಬೇಗ ಬರುತ್ತಾರೆ, ಕಾರಣ ಕೆಲವರು ಟ್ರಾಫಿಕ್ ತಪ್ಪಿಸಿಕೊಳ್ಳಲು. ಇನ್ನು ಕೆಲವರು ಸಾಯಂಕಾಲ ಬೇಗ ಮನೆಗೆ ಹೋಗಿ ಹೆಂಡತಿ-ಮಕ್ಕಳೊಂದಿಗೆ ಕಾಲ ಕಳೆಯಲು. ಮಾರ್ಕ್‌ನನ್ನು ಮೊದಲ ಸಲ ನೋಡಿದಾಗ ನನಗೆ ತಟ್ಟನೇ ನನಪಿಗೆ ಬಂದದ್ದು ನಮ್ಮೂರ ಹನುಮಪ್ಪನ ಜಾತ್ರೆಯ ಕುಸ್ತಿಗೆ ಬರುತ್ತಿದ್ದ ಬಯಲು ಸೀಮೆಯ ಪೈಲ್ವಾನರು !!! ಅದೇ ದಢೂತಿ ಮೈಕಟ್ಟು, ಅದೇ ಎತ್ತರ, ಅದೇ ಠೀವಿ, ಆದರೆ ಬಣ್ಣ ಮಾತ್ರ ಕೆಂಪು. ನಲವತ್ತರ ಹರೆಯದ ಮಾರ್ಕ್ ಕೆಲಸದಲ್ಲಿ ನನ್ನ ಬಾಸ್ ಆಗಿದ್ದರೂ ಕೂಡಾ ನಡುವಳಿಕೆಯಲ್ಲಿ ಮಾತ್ರ ಆತ್ಮೀಯ ಸ್ನೇಹಿತನಂತೆ.

ಮಾರ್ಕ್ ಸುಮಾರು ಮೂರು ತಿಂಗಳ ಹಿಂದಷ್ಟೇ ಅವನ ಹೆಂಡತಿಯೊಂದಿಗೆ `ಡೈವೊರ್ಸ್' ಪಡೆದಿದ್ದಾನೆ, ಅದಕ್ಕೂ ಮುಂಚೆ ಅವನು ತನ್ನ ಹೆಂಡತಿ-ಮಕ್ಕಳ ಬಗ್ಗೆ ಸದಾ ಆಫೀಸಿನಲ್ಲಿ ಹೇಳಿಕೊಳ್ಳುತ್ತಿದ್ದ . ಇತ್ತೀಚಿಗೆ ಅವನು ತನ್ನ ಪ್ರೀತಿಯ ನಾಯಿ `ಸ್ನೊಪೀ', ಅವನ ಹೊಸ ಕನ್ವೆರ್ಟೆಬಲ್ ಕಾರು `ಬೀಮರ್' (BMW), ಅವನ ಫಿಶಿಂಗ್ ಬೋಟುಗಳ ವಿಷಯ ಬಿಟ್ಟು ಬೇರೆ ಮಾತನಾಡುವುದಿಲ್ಲ . ವಾರಕ್ಕೋ-ತಿಂಗಳಿಗೋ ಒಮ್ಮೆ ಭೇಟಿ ಮಾಡುವ ತನ್ನ ಮಕ್ಕಳ ಬಗ್ಗೆ ಕೂಡಾ ಹೇಳಿಕೊಳ್ಳುವುದು ಅಪರೂಪ.

ಮಾರ್ಕ್ ತನ್ನ ವಿವಾಹ ವಿಚ್ಛೇದನಕ್ಕೆ ಕಾರಣವನ್ನು ಆಫೀಸ್‌ನಲ್ಲಿ ಯಾರ ಹತ್ತಿರವು ಹೇಳಿಕೊಂಡಿಲ್ಲ . ಕೆಲವೊಮ್ಮೆ ನನಗೆ ಕಾರಣ ಕೇಳಬೇಕೆನಿಸಿದರೂ, ಗಂಡಂದಿರು ಹೊಡೆಯುವ ಗೊರಕೆ ಶಬ್ದಕ್ಕೆ ಬೇಸತ್ತು ಡೈವೊರ್ಸ್ ಕೊಡುವ ಹೆಂಡತಿಯರು, ಹೆಂಡತಿಯರ ಹಾಕುವ perfume ವಾಸನೆ ತಾಳಲಾರದೆ ಡೈವೊರ್ಸ್ ನೀಡುವ ಗಂಡಂದಿರು ಇರುವ ಈ ದೇಶದಲ್ಲಿ ಕಾರಣ ಕೇಳಿ ಮೂರ್ಖನಾಗುವುದಿಕ್ಕಿಂಥಾ ಸುಮ್ಮನೆ ಇರುವುದು ಒಳಿತು ಎನಿಸಿತು. ಅದು ಬೇರೆ ಈ ದೇಶದ ಪ್ರಖ್ಯಾತ ಗಾಯಕಿ `ಬ್ರಿಟ್ನೀ ಸ್ಪಿಯರ್ಸ್' ಮದುವೆಯಾಗಿ ೪೮ ಗಂಟೆಗಳ ಒಳಗೆ ಡೈವೊರ್ಸ್ ಮಾಡಿದ ಸುದ್ದಿ ನನ್ನ ನೆನಪಿನಲ್ಲಿ ಹಸಿರಾಗಿತ್ತು. ಈ ನಾಡಿಗೆ ಗಂಡ-ಹೆಂಡತಿಯರ ನಡುವೆ ಸಣ್ಣ-ಪುಟ್ಟ ಕಾರಣಗಳಿಗೆ ವೈಮನಸ್ಸು ಬಂದಾಗ ತಿದ್ದಿ-ತಿಳಿಸಿ ಹೇಳುವ ಮೈಸೂರು ಮಲ್ಲಿಗೆಯ ಬಳೆಗಾರ ಚನ್ನಯ್ಯನಂತವರು ಬೇಕು ಎಂಬುದು ನನ್ನ ಅಂಬೋಣ.

ಮಾರ್ಕ್‌ನ ಹವ್ಯಾಸಗಳು ಹಲವು. ಅದರಲ್ಲಿ ಮುಖ್ಯವಾದದ್ದು , ಮಧ್ಯರಾತ್ರಿಯಲ್ಲಿ ಅಟ್ಲಾಂಟಿಕ್ ಸಮುದ್ರದಲ್ಲಿ ಅವನ ಮೋಟಾರ್ ಬೋಟ್‌ನಲ್ಲಿ ಫಿಶಿಂಗ್ ಮಾಡುವುದು. ನಾನು ಸುಮಾರು ಸಾರಿ ಅವನೊಂದಿಗೆ ಹೊಗಿದ್ದೇನೆ. ಆದರೆ ಮೊದಲ ಸಲದ ಫಿಶಿಂಗ್ ಅನುಭವವನ್ನು ನಾನು ಇನ್ನೂ ಮರೆತಿಲ್ಲಾ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಊರಿನ ಕಾರ್ತೀಕದ ಹುಣ್ಣೀಮೆಯಲ್ಲಿ , ಹೊಂಡದಲ್ಲಿ ಒಂದು ದಿನಕ್ಕೋಸ್ಕರ ಬಿಡುವ ಮರದ ದೋಣಿಗಳನ್ನು ನೋಡಲು ವರ್ಷವೆಲ್ಲಾ ಕಾಯುತ್ತಿದ್ದೆ . ಆದರೆ ಅವುಗಳ ಮೇಲೆ ಹತ್ತಬೇಕು ಅಂತ ಎಂದೂ ಅನಿಸಿರಲಿಲ್ಲಾ . ಬಾಲ್ಯದ ಕುತೂಹಲಗಳು ತುಂಬಾ ವಿಚಿತ್ರ!!! ಕೆಲವೊಮ್ಮೆ ಅವುಗಳನ್ನು ನೆನಸಿಕೊಂಡಾಗ ನಗು ಬರುತ್ತದೆ. ಮಾರ್ಕ್ ನನ್ನನ್ನು ಮೊದಲ ಸಲ ಫಿಶಿಂಗ್‌ಗೆ ಕರೆದಾಗ ಹೋಗಿ ಬಂದರಾಯಿತು ಇದೊಂದು ಹೊಸ ಅನುಭವ ಎಂದುಕೊಂಡು ಸಜ್ಜಾದೆ. ನಮ್ಮೂರ ಹೊಂಡದಲ್ಲಿ ಮೈಮೇಲೆ ಹಾಕಿಕೊಂಡ ಅಂಗಿಯನ್ನು ಕಳಚಿ ಅದರಿಂದ ಚಿಕ್ಕ-ಚಿಕ್ಕ ಮರಿ ಮೀನುಗಳ ಹಿಡಿದ ನೆನಪು ಬಂದು, ಇಲ್ಲಿ ರಾಶಿ-ರಾಶಿ ಹಿಡಿದು ಹಾಕಬಲ್ಲೆ ಎಂದು ಕೊಂಡು ಶೂರನಂತೆ ಹೊರಟು ನಿಂತೆ.

ನಾವು ಅಟ್ಲಾಂಟಿಕ್ ಸಮುದ್ರ ಮುಟ್ಟಿದಾಗ ಮಧ್ಯರಾತ್ರಿ ೧೨ ಗಂಟೆ ಸಮಯ. ನೀವು ಕೇಳಬಹುದು ನಾವು ಹೊರಟಿದ್ದು ಮೀನು ಹಿಡಿಯಲ್ಲಿಕ್ಕೊ, ಅಥವಾ ದೆವ್ವಗಳನ್ನು ಹೀಡಿಯಲಿಕ್ಕೊ ?, ಏನು ಮಾಡುವುದು, ಮಾರ್ಕ್‌ನಿಗೆ ಮಧ್ಯರಾತ್ರಿಯಲ್ಲಿ ಮೀನು ಹಿಡಿಯುವುದೇ ಇಷ್ಟ.

ಅಂದು ತುಂಬಾ ಗಾಳಿ ಇದ್ದದ್ದರಿಂದ ಸಮುದ್ರ ದೇವತೆ ತುಂಬಾ ಸಿಟ್ಟಿನಲ್ಲಿ ಇದ್ದಂತೆ ಕಂಡು ಬಂತು. ಒಂದೇ ಸಮನೆ ನಮ್ಮ ದೋಣಿ ಅಲುಗಾಡುತಿತ್ತು . ಆದರೂ ಕೂಡಾ ನಾವಿಬ್ಬರೂ ಒಂದೊಂದು ಗಾಳ ನೀರಿನಲ್ಲಿ ಬಿಟ್ಟುಕೊಂಡು ಕುಳಿತೆವು. ಮಾರ್ಕ್ ೩-೪ ನಿಮಿಷಕ್ಕೆ ಒಂದು ಮೀನನ್ನು ಹಿಡಿಯಲು ಶುರು ಮಾಡಿದ. ಅರ್ಧ ಗಂಟೆ ಕಳೆದರೂ ಒಂದು ಮೀನು ಕೂಡಾ ನನ್ನ ಬುಟ್ಟಿಗೆ ಬೀಳಲಿಲ್ಲ. ಕೆಲವೊಮ್ಮೆ ಮೀನು ಬಂದು ನನ್ನ ಗಾಳಕ್ಕೆ ಸಿಕ್ಕಿಕೊಂಡಾಗಲೂ ಗಾಳದ ದಾರವನ್ನು ಸುತ್ತಿಕೊಳ್ಳುವುದರೊಳಗೆ ತಪ್ಪಿಸಿಕೊಂಡು ಹೋಗುತ್ತಿದ್ದವು. ಒಂದೇ ಸಮನೆ ಅಲುಗಾಡುತ್ತಿದ್ದ ಬೋಟ್‌ನಲ್ಲಿದ್ದ ನನ್ನ ತಲೆ ತಿರುಗಿದಂತಾಗಿ, ಅಷ್ಟೊತ್ತು ಕುಲುಕಾಡುತ್ತಿದ್ದ ನನ್ನ ಹೊಟ್ಟೆಯಲ್ಲಿನ ರಾತ್ರಿ ಮಾಡಿದ ಊಟ ವಾಂತಿಯ ರೂಪದಲ್ಲಿ ಸಮುದ್ರದ ಪಾಲಾಯಿತು. ಆಗ ತಾನೇ ಹಿಡಿದು ಬಿಸಾಕಿದ ಮೀನಿನಂತೆ ಚಟಪಟಿಸುತ್ತಿದ್ದ ನನ್ನನು ನೋಡಿದ ಮಾರ್ಕ್ ನಿನಗೆ sea sickness ಆಗಿದೆ ಎಂದು ಹೇಳಿ ಬೋಟ್‌ನಲ್ಲಿ ಇದ್ದ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಹೇಳಿದ, ಅದುವರೆಗೂ ಘರ್ಜಿಸುತ್ತಿದ್ದ ಸಾಗರ ನನ್ನ ವಾಂತಿಯ ಬಲಿ ತೆಗೆದುಕೊಂಡು ಶಾಂತವಾಗತೊಡಗಿತು. ಉಯ್ಯಾಲೆಯಂತೆ ಪ್ರಶಾಂತವಾಗಿ ತೇಲುತ್ತಾ ಇರುವ ದೋಣಿಯಲ್ಲಿ ಅಂಗಾತವಾಗಿ ಮಲಗಿಕೊಂಡು ಆಕಾಶದತ್ತ ನೋಡಿದಾಗ ಹುಣ್ಣಿಮೆಯ ಚಂದ್ರ ಮತ್ತು ಸಹಸ್ರಾರು ಹೊಳೆಯುತ್ತಿರುವ ನಕ್ಷತ್ರಗಳನ್ನು ಕಂಡು ಮನಸ್ಸಿಗೆ ಒಂದು ರೀತಿಯ ಆನಂದವಾಯಿತು. ನಮ್ಮ ಊರಿನ ಮನೆಯ ಮಾಳಿಗೆಯ ಮೇಲೆ ಬೆಳದಿಂಗಳ ಬೆಳಕಿನ ಊಟ ಮಾಡಿ ಆಕಾಶದತ್ತಾ ನೋಡುತ್ತಾ ಮಲಗಿಕೊಳ್ಳುತ್ತಿದ್ದ ಬಾಲ್ಯದ ದಿನಗಳ ಸುಖ ಮರುಕಳಿಸಿದ ಅನುಭವವಾಯಿತು. ಮಾರ್ಕ್ ಮಾತ್ರ ಮೀನುಗಳನ್ನು ಹಿಡಿದು ಹಿಡಿದು ತನ್ನ ಬುಟ್ಟಿ ತುಂಬಿಸಿಕೊಳ್ಳುತ್ತಿದ್ದ. ನನಗೆ ಆ ಮೀನುಗಳಿಂದ ತುಂಬಿದ ಬುಟ್ಟಿ ನೋಡಿ ನಮ್ಮ ಊರಿನಲ್ಲಿ ಬಾಂಗ್ಡೇ-ಮೀನು ಮಾರುತ್ತಿದ್ದ ನನ್ನ ಗೆಳೆಯ ಜಮಾಲಸಾಬನ ನೆನಪು ಬಂತು.

ಹೀಗೆ ಸುಖ-ಸಂಪತ್ತಿನ ಸೆಳಕಲ್ಲಿ ಸಪ್ತಸಾಗರ ದಾಟಿ ಹುಟ್ಟೂರು ಬಿಟ್ಟು ಬಂದು ಪ್ರತಿ ಘಳಿಗೆಯಲ್ಲೂ ಒಂದಲ್ಲಾ ಒಂದು ವಿಷಯಕ್ಕೆ ನನ್ನೂರು, ಮಣ್ಣು, ನೀರು, ನನ್ನ ಬಾಲ್ಯ, ನನ್ನ ಜನ , ನನ್ನ ಸಮಾಜ, ನನ್ನ ಸಂಸ್ಕೃತಿ...... ಮುಂತಾದವುಗಳನ್ನು ನೆನಪಿಸಿಕೊಳ್ಳುವುದು ವಿದೇಶದಲ್ಲಿನ ಪ್ರತಿಯೊಬ್ಬ ದೇಶಿಯನ ಅನಿವಾರ್ಯವಾದ ಅಗತ್ಯ ಎಂಬುದು ನನ್ನ ಅನಿಸಿಕೆ. ಏನಂತೀರಿ ?

ಮಳೆ ಹನಿಯ ಮಧ್ಯೆ ಆದರ್ಶ ಗಂಡ!

ಅಂಬರೆಲಾ!!

ಕರಿಮೋಡಗಳು
ತುಂಬಿಕೊಂಡಾಗ
ಅಂಬರವೆಲ್ಲಾ!
ನಮಗೆಲ್ಲಾ
ನೆನಪಾಗುವುದು
ಅಂಬರೆಲಾ!!

ಸಿಂಡ್ರೆಲಾ

ಸಿಕ್ಕರೆ ನನಗೊಬ್ಬಳು
ಸುರ-ಸುಂದರಿ
ಸಿಂಡ್ರೆಲಾ !
ಬಿಸಿಲು ಮಳೆಯಲ್ಲಿ
ಹಿಡಿಯವೆ ಅವಳಿಗೆ
ಅಂಬ್ರೆಲಾ !!

ಆದರ್ಶ ಗಂಡ

ಹೆಂಡತಿಯ
ಮುಂದೆ ಆದವನು
Bendಉ!
ಅವನೇ
ನಿಜವಾದ
husbandಉ!!

ಭಗ್ನ ಪ್ರೇಮದ ಮೇಲೆ ಮೂರು ಹನಿಗಳು

ಭಗ್ನ ಪೇಮಿ

ತಾಳಲಾರದೆ
ನನ್ನಂಥ
ಬಡ ಪ್ರೇಮಿಯ
ಕಾಟ!
ಶ್ರೀಮಂತನೊಬ್ಬನ
ಹಸೆಮಣೆ
ಹತ್ತಿ ಹೇಳಿದಳು
ಟಾಟಾ !ಮೋಸದ ಹುಡುಗಿ

ಸಿನೆಮಾಗಳಿಗೆ ಹೋಟೆಲ್‌ಗಳಿಗೆ
ಸುತ್ತುತ್ತಿದ್ದಾಗ ಕೊಟ್ಟಿದ್ದು
ನಾನೇಎಲ್ಲಾ ಬಿಲ್ಲು!

ನೋಡಿದ್ದು- ತಿಂದದ್ದು
ಮುಗಿದ ಮೇಲೆ ನೀನೇ ಹಾಕಿದ್ದು
ನಮ್ಮ ಪ್ರೀತಿಯ ಮೇಲೆ ಕಲ್ಲು !

ಶಾಕುಂತಲಾ

ಪ್ರಿಯೆ, ನಾನು
ನಿನ್ನಮರೆತರೆ
ಮಾಡಿಕೊಳ್ಳಬೇಡ
ಕೋಪ!
ನಾನೊಬ್ಬ ದುಷ್ಯಂತ
ನನಗೂ ತಟ್ಟಿರಬಹುದು
ದುರ್ವಾಸ ಮುನಿಯ
ಶಾಪ!ಹಲೋ, ಹೇಗಿದ್ದೀಯಾ ಉಪ್ಪಿ ದಾದ?!


ಸ್ಯಾಂಡಲ್‌ವುಡ್‌ನ ವೇಗದ ನಟ, ನಿರ್ದೇಶಕ ಉಪೇಂದ್ರ ಅಂದ್ರೆ, ಪಡ್ಡೆಗಳಂತೂ ಹುಚ್ಚೆದ್ದು ಕುಣಿಯುತ್ತಾರೆ! ಈಗ ಟ್ರ್ಯಾಕ್ ಬದಲಿಸಿ, ತಮ್ಮ ಅಭಿಮಾನಿ ಪ್ರೇಕ್ಷಕರ ಗುಂಪಿಗೆ ಮಹಿಳೆಯರನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ! ಹುಟ್ಟು ಹಬ್ಬದ ಖುಷಿಯಲ್ಲಿರುವ ಉಪ್ಪಿಗೆ, ಅವರ ಅಭಿಮಾನಿಯೊಬ್ಬರು ಪತ್ರ ಬರೆದಿದ್ದಾರೆ ....

ಹೇಗಿದ್ದೀಯಾ ಗುರು ? ನಾನು ನಿನ್ನ ಅಭಿಮಾನಿ। ಆದರೆ ಅಭಿಮಾನಿ ದೇವರಲ್ಲಾ, ತುಂಬಾ ದಿವಸದಿಂದ ನಿನಗೆ ಒಂದು ಪತ್ರ ಬರೆಯೋಣ ಅಂದು ಕೊಂಡಿದ್ದೆ, ಅದಕ್ಕೆ ಟೈಮು ಈಗ ಕೂಡಿ ಬಂತು ನೋಡು ಗುರು. ನಿನ್ನ ‘ಗೌರಮ್ಮ’ ಸೂಪರ್ ಹಿಟ್ ಆಗಿದೆ ಅಂತ ಗೊತ್ತಾಯ್ತು... ತುಂಬಾ ಕಂಗ್ರ್ಯಾಜ್ಯೂಲೇಷನ್. ಏನ್ ಗುರೂ ನೀನು ‘ಓಂ’ ಚಿತ್ರ ಮಾಡಿದ್ದೆ ತಡ, ಎಲ್ಲರೂ ಅದೇ ಥರಾ ಚಿತ್ರ ಮಾಡೋಕೆ ಶುರು ಹಚ್‌ಕೊಂಡು ಬಿಟ್ಟಾವ್ರೇ, ಇರೋ ಬರೋ ಹೀರೋಗಳ ಕೈಯಲ್ಲಿ ಲಾಂಗು-ಮಚ್ಚು ನೋಡಿ ನೋಡಿ ಜನಗಳಿಗೆ ಹುಚ್ಚು ಹಿಡಿಯೋದೊಂದು ಬಾಕಿ ಇದೆ ನೋಡು.

ಕಾಶೀನಾಥ್‌ರ ಶಿಷ್ಯನಾದ ನೀನು ‘ತರ್‍ಲೆ ನನ್ಮಗ’ ಎಂಬ ತರಲೆ ಚಿತ್ರ ಮಾಡಿ ಕನ್ನಡ ಪೋಲಿ ಶಬ್ಧಕೋಶಕ್ಕೆ ಅಪಾರ ಕೊಡುಗೆ ನೀಡಿದ್ದು ಅಲ್ಲದೆ, ಸೈಡ್ ರೋಲ್ ಮಾಡ್ತಾ ಇದ್ದ ಜಗ್ಗೇಶ್‌ನನ್ನು ಲೀಡ್ ರೋಲ್‌ಗೆ ಬಡ್ತಿಮಾಡಿದರೂ ಕೂಡಾ, ಮುಂದೆ ಇದೇ ಜಗ್ಗೇಶ್ ನಿನ್ನ ‘ಉಪೇ೦ದ್ರ’ ಚಿತ್ರಕ್ಕೆ ಸವಾಲ್ ಹಾಕಿ ಕರಾಬು ಚಿತ್ರ ‘ಜಿತೇಂದ್ರ’ ಯಾಕೆ ಮಾಡ್ದಾ ಅಂತಾ ಅರ್ಥ ಆಗ್ಲಿಲ್ಲಾ ಗುರು ? ನಿನ್ನ ಮತ್ತು ಅವ್ನ ನಡುವೆ ಏನ್ ಕಿರಿಕ್ಕು ಆಯ್ತು ಉಪ್ಪಿ?।

ಮೊನ್ನೆ ವಿಸಿಡಿನಲ್ಲಿ ‘ಅನಂತನ ಅವಾಂತರ’ ನೋಡ್ತಾ ಇದ್ದೆ ಗುರು, ಆ ಚಿತ್ರದಲ್ಲಿ ಕಾಮಣ್ಣನ ಪಾತ್ರದಲ್ಲಿ ನಿನ್ನ ನೋಡಿ ನನಗೆ ಸಖ್ಖತ್ ನಗು ಬಂತು, ಆಗ ನರಪೇತಲು ನಾರಾಯಣನ ಥರಾ ಇದ್ದ ನೀನು ಈಗ ಓಳ್ಳೆ ಬಾಡಿ ಬಿಲ್ಡ್ ಮಾಡಿದ್ದೀಯಾ ... ವೆರಿಗುಡ್ ಕೀಪಿಟಪ್!।

ನೀನು ಡೈರಕ್ಟ್ ಮಾಡಿದ ನಿನ್ನ ಎರಡನೇ ಪಿಕ್ಚರ್ ‘ಶ್’ ಮಾತ್ರ ಬೊಂಬಾಟಾಗಿತ್ತು ನೋಡು ಗುರೂ, ಕನ್ನಡದಲ್ಲಿ ಆ ಥರಾ ಸಸ್ಪೆನ್ಸ್ ಥ್ರಿಲ್ಲರ್ ಮತ್ತೆ ಬಂದಿಲ್ಲಾ, ನಿನ್ನ ಗುರು ಕಾಶೀನಾಥ್ ಮಾಡಿದ ‘ಅಪರಚಿತ’ ಕೂಡಾ ಅದೇ ಥರಾ ಒಂದು ಒಳ್ಳೆ ಸಿನಿಮಾ, ಮುಂದೆ ಟೈಮ್ ಸಿಕ್ಕರೆ ದಯವಿಟ್ಟು ಇನ್ನೊಂದು ಥ್ರಿಲ್ಲರ್ ಪಿಕ್ಚರ್ ಡೈರಕ್ಟ್ ಮಾಡು। ಒಂದೇ ಒಂದು ಅಕ್ಷರ ಇರೋ ಸಿನಿಮಾ ಟೈಟಲ್ ಇಡೋ ಐಡಿಯಾ ಎಲ್ಲಿಂದ ನಿನಗೆ ಬಂತು ಉಪ್ಪಿ?.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹ್ಯಾಟ್ರಿಕ್ ಹೊಡೆದ ಮೇಲೆ ಸಾಲು ಸಾಲಾಗಿ ಸೋತ ಚಿತ್ರಗಳಿಂದ ಟ್ರ್ಯಾಕ್ ಕಳೆದು ಕೊಂಡಾಗ ರಿಯಲ್ ರೌಡಿಸಂ ಟ್ರಿಕ್ ಉಪಯೋಗಿಸಿ ಶಿವರಾಜ್ ಅಭಿಮಾನಿಗಳನ್ನು ಅಟ್ರ್ಯಾಕ್ಟ್ ಮಾಡಿ ಶಿವಣ್ಣನನ್ನು ಆಫ್ ಟ್ರ್ಯಾಕ್‌ನಿಂದ ಮರಳಿ ಟ್ರ್ಯಾಕ್‌ಗೆ ತಂದ ಅದ್ಭುತವಾದ ಚಿತ್ರವೇ ‘ಓಂ’। ‘ಓಂ’ ಬಗ್ಗೆ ಎಷ್ಟು ಹೇಳಿ ಹೊಗಳಿದರೂ ಕಡಿಮೆ ನೋಡು ದೊರೆ, ಸೀದಾ ಸಾದಾ ಬಡ ಬ್ರಾಹ್ಮಣರ ಹುಡುಗ ರೌಡಿ ಆಗೋ ಚಿತ್ರದಲ್ಲಿ ನಿಜ ಜೀವನದ ರೌಡಿಗಳನ್ನೆ ಹಾಕಿಕೊಂಡು ಚಿತ್ರ ಮಾಡುವಂತ ಧೈರ್ಯ ಮತ್ತು ಐಡಿಯಾ ನಿನಗೆ ಎಲ್ಲಿಂದ ಬಂತು ? ಅವತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಹಿಡಿದ ಈ ಮಚ್ಚು ಲಾಂಗಿನ ಹುಚ್ಚು ಇನ್ನು ಬಿಟ್ಟಿಲ್ಲಾ ನೋಡು. ಹೀರೊನ ಕೈಯಲ್ಲಿ ಫಳ ಫಳಾಂತ ಮಿಂಚಿದರೆ ಮಚ್ಚು! ಬಾಕ್ಸ್ ಆಫೀಸಿನಲ್ಲಿ ಆವಾಗಲೇ ಗಳಿಕೆ ಹೆಚ್ಚು !! ಇದಕ್ಕೆಲ್ಲಾ ನಿನ್ನ ‘ಓಂ’ ತಾನೇ ಹಚ್ಚಿದ್ದು ಕಿಚ್ಚು!!!.

ರೌಡಿಸಂ ಚಿತ್ರಗಳಿಗೆ ‘ಓಂ’ ನಿಂದ ಓಂಕಾರ ಹಾಡಿದ ನೀನು ‘ಓಂಕಾರ"ದಂಥ ಡಬ್ಬಾ ಚಿತ್ರ ಮಾತ್ರ ಮಾಡಬಾರದಿತ್ತು ನೋಡು ಶಿವಾ!। ಈ ಥರಾ ಹೇಳ್ತಿನಿ ಅಂತಾ ಬೇಜಾರು ಮಾಡ್ಕೋ ಬ್ಯಾಡಾ, ನೀನೇ ಹೇಳುವ ಹಾಗೆ ನನಗೆ ಮನಸ್ಸು ಮತ್ತು ಬಾಯಿ ನಡುವೆ ಫಿಲ್ಟರ್ ಇಲ್ಲದೆ ಹೇಳ್ತಾ ಇದ್ದೀನಿ.

ಆಮೇಲೆ ಬಂದ ನಿನ್ನ ಎರಡು ಚಿತ್ರಗಳ ಬಗ್ಗೆ ಮಾತನಾಡುವುದೇ ಬೇಡ ಎನಿಸಿದರೂ, ನಿನ್ನ ಅಭಿಮಾನಿಯಾಗಿ ಅವುಗಳ ಬಗ್ಗೆ ಹೇಳುವುದು ನನ್ನ ಕರ್ತವ್ಯ ಎಂಬುದು ನನ್ನ ಅನಿಸಿಕೆ। ನಾನು ಮಾತಾಡ್ತಾ ಇರೋದು ‘ಅಪರೇಷನ್ ಅಂತ’ ಮತ್ತು ‘ ಸ್ವಸ್ತಿಕ್’ ಚಿತ್ರಗಳ ಬಗ್ಗೆ, ಆಗ ಅಲ್ಪ ಸಲ್ಪ ಬೇಡಿಕೆಯಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ‘ ಸ್ವಸ್ತಿಕ್’ ನಿಂದ ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದರಲ್ಲಿ ನಿನ್ನ ಪಾಲು ಸಹ ಇದೆ ಎಂಬುದು ನೆನಪಿರಲಿ, ಅಷ್ಟು ಬುದ್ಧಿವಂತನಾದ ನೀನು ಇಂತಹ ಕೆಟ್ಟ ಚಿತ್ರಗಳಿಗೆ ಏಕೆ ಕೈ ಹಾಕಿದೆ ಅಂತ ನನಗೆ ಅರ್ಥ ಆಗಲಿಲ್ಲ ಉಪ್ಪಿದಾದಾ. ಇವೆರಡು ಚಿತ್ರಗಳು ನೆಲಕಚ್ಚಿದ್ದೆ ತಡಾ ನೋಡು ಗಾಂನಗರದಲ್ಲಿ ನಿನ್ನ ಬೇಡಿಕೆ ಕೂಡಾ ಪಾತಾಳ ಸೇರಿತು, ಆಗ ಛಲ ಬಿಡದ ತ್ರಿವಿಕ್ರಮನಂತೆ ನೀನೇ ಹೀರೋ ಆಗಿ ಡೈರಕ್ಟ್ ಮಾಡಿದ ‘ಎ’ ಮಾತ್ರ ನಿನ್ನ ಜೀವನದ ಮೈಲಿಗಲ್ಲು ಅಂದ್ರೆ ತಪ್ಪಾಗಲಾರದು. ಕೆಲವರ ಪ್ರಕಾರ ಈ ಚಿತ್ರಕಥೆ ನಿನ್ನ ಜೀವನದ ನಿಜ ಪ್ರೇಮ(ಳ)ಕಥೆ ಅಂಥಾ ಸುದ್ದಿ. ಅದು ನಿಜಾನಾ ಗುರು?, ‘ಎ’ ಚಿತ್ರದ ಕ್ಲೈಮ್ಯಾಕ್ಸ್ ಸೂಪರ್ ಆಗಿದೆ ನೋಡಪ್ಪ, ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಟಾರ್ ಮತ್ತು ಒಬ್ಬ ಹಿಟ್ ಮ್ಯೂಸಿಕ್ ಡೈರಕ್ಟರ್ (ಗುರುಕಿರಣ್) ಸಿಕ್ಕಿದ್ದು ಈ ಚಿತ್ರದಿಂದ. ‘ ಬುದ್ದಿವಂತರಿಗೆ ಮಾತ್ರ’ ಎಂಬ ಶೀರ್ಷಿಕೆಯೊಂದಿಗೆ ಬಂದ ಈ ಚಿತ್ರ ಚಿತ್ರರಂಗದಲ್ಲಿ ಕೋಲಾಹಲ ಮಾಡಿದ್ದು ಈಗ ಇತಿಹಾಸ.

ಇದಾದ ಮೇಲೆ ಬಂದ ಬಹುನಿರೀಕ್ಷಿತ ಚಿತ್ರ ‘ಉಪೇಂದ್ರ’, ಎಲ್ಲರೂ ನಿನ್ನನ್ನು ಕೇಳಿದರು ಚಿತ್ರಕ್ಕೆ ನಿನ್ನ ಹೆಸರನ್ನೇ ಏಕೆ ಇಟ್ಟು ಕೊಂಡೆ? ಅದಕ್ಕೆ ನಿನ್ನ ಉತ್ತರ ‘ಚಿತ್ರದ ಟೈಟಲ್‌ನಲ್ಲಿ ಇರೋದು ನನ್ನ ಹೆಸರಲ್ಲಾ, ಚಿತ್ರದಲ್ಲಿರುವ ಹೀರೋ ಮತ್ತು ಹೀರೊಯಿನ್‌ಗಳ ಹೆಸರಿನ ಮೊದಲಕ್ಷರಗಳ ಜೋಡಣೆ’(ಉ-ಉಪ್ಪಿ, ಪೇ-ಪ್ರೇಮಾ, ದ್ರ-ದ-ದಾಮಿನಿ, ರ-ರವೀನಾ), ಬುದ್ಧಿವಂತ ಕಣಯ್ಯಾ ನೀನು. ಈ ಚಿತ್ರದಲ್ಲಿ ನಿನ್ನ ವೇಷಭೂಷಣ ನೋಡಿ ಗಾಂನಗರ ನಿನಗೆ ‘ಹುಚ್ಚ’ ಎಂಬ ಪಟ್ಟ ಕಟ್ಟಿತು, ಆ ಚಿತ್ರದಲ್ಲಿ ನಿನ್ನ ಶೇವಿಂಗ್ ಮಾಡಿದ ಸ್ಟೈಲ್ ಮಾತ್ರ ‘ಬ್ಯಾಕ್‌ಸ್ಟ್ರೀಟ್ ಬಾಯ್ಸ್’ಎಂಬ ಪಾಪ್ ಬ್ಯಾಂಡಿನ ಗಾಯಕ ‘ಎ. ಜೆ. ಮೆಕ್ಲಿನ್’ ನಿಂದ ಕಾಫಿ ಹೊಡೆದದ್ದು ತಾನೆ?.
‘ಉಪೇಂದ್ರ’ ಚಿತ್ರದಲ್ಲಿ ಹೆಂಗಸರನ್ನು ಬೈಯುವ ಮತ್ತು ಗೋಳುಹೊಯ್ದು ಕೂಳ್ಳುವ ಸೀನ್‌ಗಳನ್ನು ಬಿಟ್ಟು ಉಳಿದಂತೆ ಚಿತ್ರ ಚೆನ್ನಾಗಿ ಇತ್ತು, ಹೆಸರಿಗೆ ತಕ್ಕಂತೆ ಚಿತ್ರ ಉಪೇಂದ್ರಮಯವಾಗಿದ್ದುದಕ್ಕೆ ಸೂಪರ್ ಹಿಟ್ ಆಯಿತು.
ಇದಾದ ಮೇಲೆ ನೀನು ಕೈ ಹಾಕಿ ಸುಟ್ಟುಕೊಂಡ ದೊಡ್ಡ ಪ್ರಮಾಣದ ಚಿತ್ರ ‘ಎಚ್‌ಟು‌ಒ’. ನನಗೆ ಗೊತ್ತು ಗುರು, ಇದು ನಿನ್ನ ಕನಸಿನ ಚಿತ್ರ, ತುಂಬಾ ಶ್ರಮ ಮತ್ತು ಟೈಮ್ ಖರ್ಚು ಮಾಡಿ ಈ ಚಿತ್ರ ಮಾಡಿದ್ದಕ್ಕೆ ನೀನು ಹಲವಾರು ವಿವಾದಗಳಿಗೆ ಗುರಿಯಾಗ ಬೇಕಾಯ್ತು. ಹೋಗಲಿ ಬಿಡು ಉಪ್ಪಿ ಈ ಚಿತ್ರದಿಂದ ಒಂದಾದರೂ ಒಳ್ಳೆ ಕಾರ್ಯ ಆಯ್ತಲ್ಲಾ, ಈ ಚಿತ್ರದಿಂದ ತಾನೇ ನಿನಗೆ ನಿನ್ನ ಬಾಳ ಸಂಗಾತಿ ಪ್ರಿಯಾಂಕಳ ಜೊತೆ ಪ್ರೇಮಾಂಕುರವಾಗಿದ್ದು ?. ‘ಉಪೇಂದ್ರ’ ಚಿತ್ರದಿಂದ ನಿನ್ನ ಮೇಲೆ ಕೋಪ ಮಾಡಿಕೊಂಡಿದ್ದ ಹೆಂಗಸರು ‘ಎಚ್‌ಟು‌ಒ’ ಚಿತ್ರದಲ್ಲಿ ಇರೋ ನೀನು ಬರೆದಿರೋ ಸೂಪರ್ ಹಿಟ್ ಹಾಡು ‘ ಹೂವೇ... ಹೂವೇ...’ ಕೇಳಿದ ತಕ್ಷಣ ಅವರೆಲ್ಲರ ಕೋಪ ಕರಗಿ ಹೋಗಿದ್ದು ನಿಜವೇ?. ಈ ವಿವಾದಗಳಿಂದ ಅಷ್ಟೋಂದು ಬೇಜಾರಾದ ನೀನು ಚಿತ್ರ ನಿರ್ದೇಶನ ಮಾಡೋದನ್ನೆ ನಿಲ್ಲಿಸಬೇಕಾಯ್ತು ಎಂಬುದು ಎಷ್ಟರ ಮಟ್ಟಿಗೆ ನಿಜ ?.
ಇದಾದ ಮೇಲೆ ನೀನು ನಟಿಸಿದ ಸಿಕ್ಕಾಪಟ್ಟೆ ರೀಮೇಕ್ ಚಿತ್ರಗಳಲ್ಲಿ ‘ಪ್ರೀತ್ಸೆ’ ಮತ್ತು ‘ ಕುಟುಂಬ’ ಬಿಟ್ರೇ ಬೇರಾವ ಚಿತ್ರಗಳು ಹೇಳೋಕೆ ಹೆಸರಿಲ್ಲದಂತೆ ತೋಪು ಹೊಡೆದು ಹೋದವಲ್ಲಾ ಶಿವಾ, ಹೋಗಲಿ ಬಿಡು ಚೆನ್ನಾಗಿ ದುಡ್ಡಾದರು ಮಾಡ್ಕೊಂಡಿ ತಾನೆ?, ಆಮೇಲೆ ನೀನು ಮಾಡಿದ ನಿನ್ನ ಡೈಲಾಗ್ ಬರಿತ ‘ರಕ್ತ ಕಣೀರು’ ಹಿಟ್ ಆಗಿದ್ದರಲ್ಲಿ ಆಶ್ಚರ್ಯವೇನಿಲ್ಲ, ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ ಅದೇನೆಂದರೆ ನಿನ್ನ ನಿಜವಾದ ಕಲೆ ಇರೋದು ನಿನ್ನ ನಿರ್ದೇಶನ ಮತ್ತು ಸಿನಿಮಾ ಸಾಹಿತ್ಯದಲ್ಲಿ. ಇತ್ತೀಚೆಗೆ ಬಂದ ‘ಓಂಕಾರ’, ‘ನ್ಯೂಸ್’, ‘ಆಟೋ ಶಂಕರ್’ಚಿತ್ರಗಳಲ್ಲಿ ನಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದೀಯಾ ಎಂಬುದನ್ನು ಓದಿದೆ, ಸಂತೋಷ.
ಒಂದಲ್ಲ ಒಂದು ದಿನ ಮತ್ತೆ ನೀನು ನಿರ್ದೇಶನದತ್ತ ಮರಳಿ, ಕನ್ನಡ ಚಿತ್ರರಂಗವನ್ನು ಪ್ರಜ್ವಲಗೊಳಿಸುವೆ ಎಂದು ಎದುರು ನೋಡುತ್ತಿರುವ ನಿನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಬೇಡ। ನಿನ್ನ ಖಾಸಗಿ ಜೀವನದ ಬಗ್ಗೆ ಕೆಟ್ಟದಾಗಿ ಬರೆದ ಪತ್ರಿಕೆಗಳ ಬಗ್ಗೆ ಮಾಡಿಕೊಳ್ಳಬೇಡ ಗುರು ನೀನು ಟೆನ್ಷನ್! ಈ ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಪ್ರಿಂಟಾಗುವ ಪತ್ರಿಕೆಗಳಿಗೆ ನೀನೇ ಅಲ್ವಾ ರೇಷನ್!!.

ಹೇಗಿದ್ದಾನೆ ನಮ್ಮ ಜೂನಿಯರ್ ಉಪ್ಪಿ ! ಅವನಿಗೆ ತಿಳಿಸು ನನ್ನ ಪ್ರೀತಿಯ ಪಪ್ಪಿ !!. ಕೊನೆಯದಾಗಿ ನಿನಗೆ ಹೃದಯಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳು ಸ್ವಲ್ಪ ತಡವಾಗಿ. ನೂರಾರು ವರ್ಷ ಸುಖವಾಗಿ ಬಾಳು. ಯಾವಾಗಲಾದರು ನ್ಯೂಯಾರ್ಕ್‌ಗೆ ಬಂದರೆ ದಯವಿಟ್ಟು ನಮ್ಮ ಮನೆಗೆ ಒಂದು ಸಲ ಭೇಟಿಕೊಡು.
-ಅಕ್ಕರೆಯೊಂದಿಗೆ ನಿನ್ನ ಅಭಿಮಾನಿ.
ಅಮೇರಿಕನ್ ಮದುವೆಯ ಈ ಬಂಧ ಅನುರಾಗದ ಅನುಬಂಧ

"ಮದುವೆ ಎಂದರೆ ಗಂಡು ಹೆಣ್ಣಿನ ಕನಸುಗಳ ಮೆರವಣಿಗೆಯಷ್ಟೇ ಅಲ್ಲ , ನೆರೆದವರ ಎದೆಗಳಲ್ಲೂ ನೆನಪುಗಳ ಧಾರಾಕಾರ ಮಳೆ. ಅಮೆರಿಕನ್ ಗೆಳೆಯನೊಬ್ಬನ ಮದುವೆಯಲ್ಲಿ ಪಾಲ್ಗೊಂಡ ಅರಿಷಿಣದ ಮೈ ಆರದ ಲೇಖಕ, ತನ್ನ ಮದುವೆಯನ್ನು ನೆನಪಿಸಿಕೊಳ್ಳುವ ಕ್ಷಣಗಳು....."


-ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯

‘ಮದುವೆಯ ಈ ಬಂಧ ಅನುರಾಗದ ಅನುಬಂಧ.....’ ನನ್ನವಳ ಸೋದರಮಾವ ನಮ್ಮ ಮದುವೆಯಲ್ಲಿ ಹಾಡಿದ ಈ ಇಂಪಾದ ಹಾಡು ಇಂದು ಕೂಡಾ ನನ್ನ ಕಿವಿಯಲ್ಲಿ ಗುನುಗುತ್ತಿದೆ. ಎರಡು ತಿಂಗಳ ಅಂತರದಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಂಡ ಎರಡು ರೀತಿಯ(ಪೂರ್ವ-ಪಶ್ಚಿಮ) ಮದುವೆಗಳ ಸೋಗು, ಸರಸ, ಸ್ವಾರಸ್ಯ, ಸಮರಸಗಳನ್ನು ನಿಮಗೆ ತಲುಪಿಸುವ ಪ್ರಯತ್ನವೇ ಈ ಲೇಖನ. ಮೊದಲನೆಯದಾಗಿ ಭಾರತೀಯ-ಕರ್ನಾಟಕದ ಶೈಲಿಯಲ್ಲಿ ನಡೆದ ನನ್ನ ಮತ್ತು ನನ್ನವಳ ನಮ್ಮ ಮದುವೆ, ಇನ್ನೊಂದು ಅಮೇರಿಕನ್ ಶೈಲಿಯಲ್ಲಿ ನಡೆದ ನನ್ನವಳ ಸಹದ್ಯೋಗಿ ‘ರಿಕ್’ ಮತ್ತು ಅವನ ಸಂಗಾತಿ ‘ಜೆಸ್’ ಒಂದಾದ ಮದುವೆ. ಭಾರತೀಯ ಮದುವೆಗಳು ಜಗತ್‌ಪ್ರಸಿದ್ಧ. ಹಾಗಾಗಿ ನಮ್ಮ ಮದುವೆಗಳ ಶಾಸ್ತ್ರ, ಸಡಗರ, ಸಂಭ್ರಮಗಳು ಬಹುಶಃ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ.

ರಿಕ್ ನಮಗೆ ಮದುವೆಯ ಮಮತೆಯ ಕರೆಯೋಲೆಯನ್ನು ಕಳಿಸಿದಾಗ, ಭಾರತದಿಂದ ಹೊಸದಾಗಿ ಮದುವೆಯಾಗಿ ಬಂದ ನಮಗೆ ಅಮೇರಿಕನ್ ವೆಡ್ಡಿಂಗ್ ನೋಡುವ ಕುತೂಹಲ ಸಹಜವಾಗಿ ಮೂಡಿ ಬಂತು. ರಿಕ್ ಮತ್ತು ಜೆಸ್ ಸುಮಾರು ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಹಾಗು ಒಟ್ಟಿಗೆ ವಾಸಿಸುತ್ತಿದ್ದಾರೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸ ಬಯಸುತ್ತೇನೆ. ಅದೇನೆಂದರೆ ‘ಜೆಸ್’ ಎಂಬುದು ಹುಡುಗಿಯ ಹೆಸರು, ಅವಳು ರಿಕ್‌ನ ಕನಸಿನ ಕನ್ಯೆ, ಏಕೆಂದರೆ ಇತ್ತೀಚೆಗೆ ಅಮೇರಿಕಾದಲ್ಲಿ ಹೆಚ್ಚಾಗುತ್ತಿರುವ ಸಲಿಂಗ ಮದುವೆಗಳ ಬಗ್ಗೆ ನೀವು ಕೇಳಿರಬಹುದು. ಅದಕ್ಕಾಗಿ ಈ ಅಮೇರಿಕನ್ ಮದುವೆಗಳ ವಿಚಾರ ಬಂದಾಗ ಲಿಂಗಗಳನ್ನು ಒತ್ತಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಿಕ್‌ಗೆ ಇದು ಮೊದಲನೆಯ ಮದುವೆಯಾದರೆ, ಜೆಸ್‌ಗೆ ಇದು ಎರಡನೆಯದು. ಮೊದಲನೆಯ ಮದುವೆಯಿಂದ ಅವಳಿಗೆ ೧೩ ವರ್ಷದ ಮಗನಿದ್ದಾನೆ. ಕರೆಯೋಲೆಯ ಪ್ರಕಾರ ಅಂದು ಮುಂಜಾನೆ ಚರ್ಚ್‌ನಲ್ಲಿ ಕ್ಯಾಥೋಲಿಕ್ ರೀತಿಯಲ್ಲಿ ಮದುವೆ ಶಾಸ್ತ್ರ . ಸಾಯಂಕಾಲ ರೆಸಾರ್ಟ್‌ನಲ್ಲಿ ರಿಸೆಪ್ಷನ್ ಹಮ್ಮಿಕೊಂಡಿದ್ದರು.


ನಾವು ಮದುವೆಗೆ ಹಾಜರ್ ಆಗುವುದು ಖಾತ್ರಿ ಇದ್ದರೆ, ಮದುವೆಯ ದಿನ ನಾವು ಮಾಡಬೇಕಾದ ಊಟದ ಆಯ್ಕೆಯೊಂದಿಗೆ ಒಂದು ವಾರ ಮುಂಚೆ ತಿಳಿಸುವಂತೆ ರಿಕ್ ಹೇಳಿದ. ನನಗೆ ಕೂಡಲೇ ಎರಡು ಘಟನೆಗಳು ನೆನಪಿಗೆ ಬಂದವು. ಒಮ್ಮೆ ನನ್ನ ಗೆಳೆಯನ್ನೊಬ್ಬನ ಮದುವೆಯಲ್ಲಿ ಊಟಕ್ಕೆ ಬಂದವರನ್ನು ಅರ್ಧಂಬರ್ಧ ಊಟ ಹಾಕಿ ಕೂರಿಸಿ ಅಂಗಡಿಯಿಂದ ಅಕ್ಕಿ ತಂದು ಅನ್ನ ಮಾಡಿ ಬಡಿಸಿದ್ದು, ಹಾಗೂ ಇನ್ನೊಮ್ಮೆ ನಾವು ಬೆಂಗಳೂರಿನಲ್ಲಿ ಗೆಳೆಯನ ತಂಗಿಯ ಮದುವೆ ನಡೆಯುತ್ತಿದ್ದ ಛತ್ರವನ್ನು ಹುಡುಕಿ-ಹುಡುಕಿ ಸಾಕಾಗಿ ಸೋತು ಸುಸ್ತಾಗಿ ಕೊನೆಗೆ ಸಿಕ್ಕ ಯಾವುದೋ ಛತ್ರದಲ್ಲಿ ಯಾರದೋ ಮದುವೆಯಲ್ಲಿ ಮದುವೆಯೂಟ ಮಾಡಿ ಹಸಿವು ತೀರಿಸಿಕೊಂಡು ಬಂದದ್ದು.

ಮದುವೆಯ ದಿನ ಮಧ್ಯಾಹ್ನ ೧೨ರ ಸುಮಾರಿಗೆ ಅವನು ಕೊಟ್ಟ ಮಾಹಿತಿಯ ಪ್ರಕಾರ ಚರ್ಚ್ ಹುಡುಕಿಕೊಂಡು ಹೋಗಿ ಸೇರಿದೆವು. ಹುಡುಕಲೇ ಬೇಕಲ್ಲಾ , ನಮ್ಮ ಮದುವೆಗಳ ತರ ಯಾವುದೋ ಛತ್ರಕ್ಕೆ ನುಗ್ಗುವುದು ಇಲ್ಲಿ ಕಷ್ಟವಾಗಬಹುದು. ಇಲ್ಲಿಯ ಸಂಪ್ರದಾಯದ ಪ್ರಕಾರ ಮದುಮಗ ತನ್ನ ಕಾರನ್ನು ಹತ್ತಿರದ ಸಂಬಂಗಳಿಗೆ ಕೊಟ್ಟು ಮದುಮಗಳನ್ನು ಕರೆದುಕೊಂಡು ಬರಲು ಕಳಿಸುತ್ತಾನೆ. ಅವಳಿಗೋಸ್ಕರ ಚರ್ಚ್ ಮುಂದೆ ಕಾಯುತ್ತಿರುತ್ತಾನೆ, ಮದುಮಗನೊಂದಿಗೆ ಅವನ ‘ಬೆಸ್ಟ್-ಮ್ಯಾನ್’ ಕೂಡ ಹೂವಿನ ಗುಚ್ಛ(ಬುಕ್ಕೆ) ಹಿಡಿದುಕೊಂಡು ನಿಂತಿರುತ್ತಾನೆ. ಬಹುತೇಕ ಮದುವೆಗಳಲ್ಲಿ ‘ಬೆಸ್ಟ್-ಮ್ಯಾನ್’ ಆಗುವವನು ಮದುಮಗನ ಪ್ರಾಣಸ್ನೇಹಿತನಾಗಿರುತ್ತಾನೆ. ಈ ಮದುವೆಯಲ್ಲಿ ಕೂಡಾ ರಿಕ್‌ನ ಬಾಲ್ಯಸ್ನೇಹಿತನಾದ ‘ಜೋಸೆಫ್’ ಆ ಸ್ಥಾನವನ್ನು ಅಲಂಕರಿಸಿದ್ದನು. ನಮ್ಮ ಮದುವೆಗಳಲ್ಲಿ ಈ ರೀತಿಯ ‘ಬೆಸ್ಟ್-ಮ್ಯಾನ್’ ಇಲ್ಲದ್ದಿದ್ದರೂ , ನೀವು ನಿಮ್ಮ ಅಣ್ಣನ ಅಥವಾ ಅಕ್ಕನ ಮದುವೆಯಲ್ಲಿ ಅಥವಾ ಹತ್ತಿರದ ಗೆಳೆಯನ ಮದುವೆಯಲ್ಲಿ ಮಿಂಚಿದ್ದು ನೆನಪಿಸಿಕೊಳ್ಳಬಹುದು. ಇದು ಕೂಡಾ ಅದೇ ರೀತಿಯ ಕಾನ್ಸೆಪ್ಟ್ ಅಂತ ನನಗೆ ಅನಿಸಿತು.

ವಧು ಇದ್ದ ಕಾರು ಚರ್ಚ್ ಮುಂದೆ ಬರುತ್ತಿದ್ದಂತೆ ಬೆಸ್ಟ್-ಮ್ಯಾನ್ ಮುಂದೆ ಹೋಗಿ ಕಾರ್ ಬಾಗಿಲನ್ನು ತೆಗೆದು ಅವಳಿಗೆ ಹೂಗುಚ್ಛ ನೀಡಿ ಕೆನ್ನೆಗೆ ಮುದ್ದು ಕೊಟ್ಟು ಆಲಂಗಿಸಿ ಬರಮಾಡಿಕೊಳ್ಳುತ್ತಾನೆ. ನಮ್ಮ ಮದುವೆಯಲ್ಲಿ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ ನನ್ನನ್ನು ಬರಮಾಡಿಕೊಂಡ ನನ್ನ ಐವರು ನಾದಿನಿಯರು ನನ್ನ ಪಾದಗಳಿಗೆ ನೀರು ಹಾಕಿ, ಓಕಳಿ ಚೆಲ್ಲಿ, ಆರತಿಯನ್ನು ಬೆಳಗಿದರು. ಆದರೆ ಆ ಆರತಿ ತಟ್ಟೆಯಲ್ಲಿ ದೊಡ್ಡ ಮೊತ್ತದ ದಕ್ಷಿಣೆ ಹಾಕುವವರೆಗೆ ನನ್ನನ್ನು ಒಳಗೆ ಬಿಡಲ್ಲಿಲ್ಲ . ಅದಾದ ನಂತರ ಅವರು ಆರತಿ ಹಿಡಿದುಕೊಂಡು ನನ್ನ ಮುಂದೆ ಬಂದರೆ ನನಗೆ ಹೆದರಿಕೆ ಆಗುತ್ತಿತ್ತು ನೋಡಿ! ಇದಾದ ನಂತರ ವಧು-ವರರು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಜೊತೆಯಾಗಿ ಚರ್ಚ್‌ನ ಒಳಗೆ ನಿಧಾನವಾಗಿ ನಡೆದುಕೊಂಡು ಬಂದರು, ಬಹುತೇಕ ಮದುವೆಗಳಲ್ಲಿ ವಧು ತನ್ನ ಆಕರ್ಷಕವಾದ ಬಿಳಿಯ ಬಣ್ಣದ ಮದುವೆಯ ಉಡುಗೆಯಲ್ಲಿ ಕಾಣಿಸಿಕೊಂಡರೆ, ವರ ಕಪ್ಪು ಅಥವಾ ನೀಲಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ. ವಧುವಿನ ಉಡುಗೆ ತುಂಭಾ ದುಬಾರಿ ಬೆಲೆಯದ್ದಾಗಿರುತ್ತದೆ. ಅದಕ್ಕಾಗಿ ತುಂಬಾ ಮದುವೆಗಳಲ್ಲಿ ಈ ಉಡುಗೆಗಳನ್ನು ಬಾಡಿಗೆಗೆ ತರುವುದುಂಟು. ನಮ್ಮಲ್ಲಿ ಮದುವೆ ಸೀರೆಗಳನ್ನು ಬಾಡಿಗೆ ತರಲು ಶುರು ಮಾಡಿದರೆ ನಮ್ಮ ಸೀರೆ ಅಂಗಡಿಗಳ ವ್ಯಾಪಾರದ ಗತಿ ಏನಾಗಬೇಕು ಹೇಳಿ?

ಇದಾದ ನಂತರ ಮದುವೆಗೆ ಬಂದ ಎಲ್ಲರೂ ಚರ್ಚ್‌ನ ಒಳಗೆ ಹೋಗಿ ಆಸೀನರಾದೆವು. ನಮ್ಮ ಮದುವೆಯಲ್ಲಿ ಇಷ್ಟು ಸುಲಭವಾಗಿ ಮದುವೆಯ ಶಾಸ್ತ್ರಗಳು ಶುರುವಾಗುವುದಿಲ್ಲ . ಮದುವೆ ಗಂಡು ಕಾಶೀ ಯಾತ್ರೆಗೆ ಹೊರಡಲು ಸಿದ್ಧನಾಗಬೇಕು, ವಧುವಿನ ತಂದೆ-ತಾಯಿಗಳು ಬಂದು ವರನನ್ನು ಮದುವೆಗೆ ಒಪ್ಪಿಸಿಕೊಂಡು ವಾಪಸ್ಸು ಕರೆದುಕೊಂಡು ಬರಬೇಕು. ನಮ್ಮ ಮದುವೆಯಲ್ಲಿ ನಾನು ಹೀಗೆ ಕಾಶೀ ಯಾತ್ರೆಯ ಶಾಸ್ತ್ರದ ಮೇಲೆ ಹತ್ತಿರದ ದೇವಸ್ಥಾನಕ್ಕೆ ಹೋಗಿ ಕುಳಿತಿದ್ದೆ . ಸುಮಾರು ಹೊತ್ತಾದರೂ ಅವಳ ತಂದೆ-ತಾಯಿಗಳು ನನ್ನತ್ತ ಸುಳಿಯಲಿಲ್ಲ! ಆಗ ನಾನು ಸ್ವಲ್ಪ ಕಸಿವಿಸಿಗೊಂಡದ್ದುಂಟು, ಹಾಗಾಗಿ ಕಾಶೀ ಯಾತ್ರೆಯ ಶಾಸ್ತ್ರಮಾಡಿಸಿಕೊಳ್ಳುವುದು ಸ್ವಲ್ಪ ರಿಸ್ಕಿ ಎಂದು ಹೇಳಬಹುದು.

ಚರ್ಚ್‌ನ ಪಾದ್ರಿಗಳು ನೆರೆದ ಎಲ್ಲಾ ಅತಿಥಿಗಳಿಗೆ ಸ್ವಾಗತ ಕೋರಿದರು. ಅದಾದ ನಂತರ ವಧು, ವರ, ಬೆಸ್ಟ್‌ಮ್ಯಾನ್, ಬ್ರೈಡ್ಸ್‌ಮೇಡ್(ವಧುವಿನ ಸ್ನೇಹಿತೆ) ಈ ನಾಲ್ವರು ಸ್ಟೇಜ್ ಮೇಲೆ ಪಾದ್ರಿಯ ಕಡೆ ಮುಖಮಾಡಿ ಕುಳಿತರು. ರಿಕ್ ತನ್ನ ಮದುವೆಯಲ್ಲಿ ಒಂದು ಶಾಸ್ತ್ರವನ್ನೂ ಕೂಡಾ ಬಿಡದೆ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ, ಇನ್ನೂ ಮದುವೆಯಾಗ ಬೇಕಾಗಿರುವ ಯುವಕ-ಯುವತಿಯರಿಗೆ ನನ್ನ ಒಂದು ಕಿವಿಮಾತು, ನಿಮ್ಮ ಮದುವೆಯಲ್ಲಿ ಶಾಸ್ತ್ರ ಮಾಡಿಸಿಕೊಳ್ಳುವುದೋ? ಬೇಡವೊ ? ಎಂಬ ನಿರ್ಧಾರ ಇಂದು ನಿಮ್ಮ ಕೈಯಲ್ಲಿದೆ ನಿಜ ! ಆದರೆ ಮದುವೆಯ ದಿನ ಮಂಟಪದಲ್ಲಿ ಅದು ನಿಮ್ಮ ಕೈ ಜಾರಿ ಹೋಗುವುದು, ಪುರೋಹಿತರ ಮೌಲ್ಯಭರಿತ ಶಾಸ್ತ್ರದ ಸಾರ್ವಭೌಮತ್ವದ ಮುಂದೆ ನಮ್ಮದು ಏನೂ ನಡೆಯುವುದಿಲ್ಲ . ಎಷ್ಟು ಬೇಡವೆಂದರೂ ನನ್ನ ತಾಯಿ ಮುತ್ತೈದೆಯರನ್ನು ಕರೆದು ನನಗೆ ಕಾಲು ಕೇಜಿ ಅರಿಶಿಣ ಬಡಿದು ಎರಡು ಹಂಡೆ ಬಿಸಿನೀರು ತಲೆ ಮೇಲೆ ಸುರಿದು ಸಮಾಧಾನ ಪಟ್ಟರು. ಪ್ರೀತಿಯ ಭಾವಿ ವಧು-ವರರುಗಳೇ ಸುಮ್ಮನೆ ಕುಳಿತು ಕೊಂಡು ಶಾಸ್ತ್ರ ಮಾಡಿಸಿಕೊಳ್ಳಿ, ಆ ಕ್ಷಣ ಒಂದು ಸಲ ನಿಮ್ಮ ಹೆತ್ತವರ ಕಡೆಗೆ ತಿರುಗಿ ನೋಡಿ, ಅವರ ಕಣ್ಣುಗಳಲ್ಲಿ ಕಾಣುವ ಹೆಮ್ಮೆಭರಿತ ಆನಂದಮಿಶ್ರಿತ ಪ್ರೀತಿಯನೊಮ್ಮೆ ನೋಡಿ ಅದಾದ ನಂತರ ಇನ್ನೊಮ್ಮೆ ನನಗೆ ಶಾಸ್ತ್ರ ಬೇಡವೆಂದು ಹೇಳಲು ನಿಮಗೆ ಮನಸ್ಸು ಬರುವುದಿಲ್ಲ.

ನವಜೋಡಿಯ ಹತ್ತಿರದ ಸಂಬಂಗಳು ಒಬ್ಬೊಬ್ಬರಾಗಿ ಸ್ಟೇಜ್ ಮೇಲೆ ಹೋಗಿ ಬೈಬಲ್‌ನ ಕೆಲವೊಂದು ಆಯ್ದ ಪುಟಗಳನ್ನು ಓದಿದರು. ಅದಾದ ನಂತರ ಪಾದ್ರಿಗಳು ಮದುವೆಯ ಮಹತ್ವವನ್ನು ಸೊಗಸಾಗಿ ವಿವರಿಸಿದರು. ನನಗೆ ತುಂಬಾ ಇಷ್ಟವಾದ ಅವರ ಕೆಲವು ವಾಖ್ಯಾನುಗಳು ಹೀಗಿವೆ ‘ಮದುವೆಯ ಪ್ರಮುಖ ಗುರಿ ಗಂಡು-ಹೆಣ್ಣು ಒಂದೇ ರೀತಿ ಯೋಚಿಸುವುದಲ್ಲ , ಒಂದು ಗೂಡಿ ಯೋಚಿಸುವುದು’, ‘ದಾಂಪತ್ಯದಲ್ಲಿ ಬಿರುಕು ಬರಲು ಕಾರಣ ಪ್ರೀತಿಯ ಬರವಲ್ಲ , ಗೆಳೆತನದ ಬರ!’ ಮುಂತಾದ ನುಡಿ ಮುತ್ತುಗಳು ಮನಸ್ಸಿಗೆ ತಟ್ಟುವಂತಿದ್ದವು. ಇದಾದ ನಂತರ ಪಾದ್ರಿಗಳು ನವಜೋಡಿಯಿಂದ ‘ಸೊಲ್ಮನ್-ಪ್ರಾಮ್ಮಿಸ್’ ಮಾಡಿಸಿದರು. ಈ ಶಾಸ್ತ್ರದಲ್ಲಿ ವಧುವರರಿಬ್ಬರ ಬಲಗೈಗಳನ್ನು ಜೋಡಿಸಿ ದೇವರ ಮುಂದೆ ಕಾಯ-ವಾಚ-ಮನಸಾ ಜೀವನದ ಪ್ರತಿಹಂತದಲ್ಲಿ, ಆರೋಗ್ಯ-ಅನಾರೋಗ್ಯದಲ್ಲಿ, ಸುಖ-ದುಃಖದಲ್ಲಿ, ಸಿರಿ-ಬಡತನದಲ್ಲಿ ಜೊತೆಗಿರುವೆವು ಎಂದು ಪ್ರಮಾಣ ಮಾಡಬೇಕು. ನಂತರ ‘ರಿಂಗ್-ಎಕ್ಸ್‌ಚೇಂಜ್’. ನಮ್ಮ ಮದುವೆಗಳಲ್ಲಿ ತಾಳಿಗೆ ಕೊಡುವ ಪ್ರಾಮುಖ್ಯತೆಯನ್ನು ಇಲ್ಲಿಯವರು ರಿಂಗ್‌ಗೆ ಕೊಡುತ್ತಾರೆ. ಬಹುತೇಕ ಮದುವೆಗಳಲ್ಲಿ ವಜ್ರದ ಉಂಗುರ ವಿನಿಮಯ ಮಾಡಿಕೊಳ್ಳುತ್ತಾರೆ. ನಾವು ‘ಅರಿಶಿಣವೇ ಬೇಕು ತಾಳಿಗೆ’ ಎಂದರೆ - ಇವರು ‘ಡೈಮಂಡೇ ಬೇಕು ರಿಂಗೀಗೆ’ ಎನ್ನುವರು ನೋಡಿ. ಈ ವಾಡಿಕೆ ನಮ್ಮಲ್ಲಿ ಕೂಡಾ ಈಗ ರೂಢಿಗೆ ಬಂದಿದೆ. ಚರ್ಚ್‌ನಲ್ಲಿ ನೆರೆದವರಿಗೆಲ್ಲಾ ಪಾದ್ರಿಗಳು ಎದ್ದು ನಿಲ್ಲಲು ಹೇಳಿ, ತಲೆ ಬಗ್ಗಿಸಿ ನವಜೋಡಿಗೆ ಒಳ್ಳೆಯದಾಗಲಿ ಎಂದು ಮೌನವಾಗಿ ದೇವರಲ್ಲಿ ಪ್ರಾರ್ಥಿಸುವಂತೆ ಹೇಳಿದರು. ದಂಪತಿಗಳನ್ನು ಉದ್ದೇಶಿಸಿ ಪಾದ್ರಿಗಳು ‘ನೀವು ಈ ಕ್ಷಣದಿಂದ ಗಂಡ-ಹೆಂಡಂದಿರು, ರಿಕ್ ನೀನು ನಿನ್ನ ನವವಧುವನ್ನು ಈಗ ಚುಂಬಿಸಬಹುದು’ ಎಂದಾಗ ರಿಕ್ ಮತ್ತು ಜೆಸ್ ಒಬ್ಬರನೊಬ್ಬರು ಭಾವನಾತ್ಮಕವಾಗಿ ಚುಂಬಿಸುತ್ತಾ ಅಲಂಗಿಸಿಕೊಂಡರು, ನೆರೆದವರು ಚಪ್ಪಾಳೆಯ ಮಳೆಗರೆದರು. ನಮ್ಮ ಮದುವೆಗಳ ಗಟ್ಟಿಮೇಳ ಅಲ್ಲಿ ಇದ್ದಿದ್ದರೆ ಮದುವೆಗೆ ಇನ್ನೂ ಮೆರಗು ಬರುತ್ತಿತ್ತು .

ನಮ್ಮಲ್ಲಿ ಬಹಳಷ್ಟು ಜನ ಅವರವರ ಮದುವೆಯ ಗಟ್ಟಿಮೇಳ ಹಾಗು ಅಕ್ಷತೆಗಳ ಸುರಿಮಳೆಯನ್ನು ಜೀವನಪೂರ್ತಿ ಮರೆಯುವುದಿಲ್ಲ . ಅದು ನಮ್ಮೆಲ್ಲರ ಜೀವನದ ಒಂದು ಮಹತ್ವದ ಅಪರೂಪದ ಮರೆಯಲಾಗದ ಕ್ಷಣ. ಆಮೇಲೆ ಶುರುವಾಯಿತು ನೋಡಿ ‘ಫೋಟೊ ಸೆಷನ್’. ಕೂಡಲೆ ನನಗೆ ನೆನಪಾಗಿದ್ದು ನಮ್ಮ ಮದುವೆಯ ಪ್ರಚಂಡ ಫೋಟೊಗ್ರಾಫರ್ ಲಕ್ಷ್ಮೀಕಾಂತರವರು. ಅವರು ಕೇಳುವ ಪೋಸ್ ಕೊಟ್ಟು ಕೊಟ್ಟು ಸುಸ್ತಾಗಿ ಅವರ ಮೇಲೆ ಕೆಲವೊಮ್ಮೆ ಸಿಡಿಮಿಡಿಗೊಂಡದ್ದುಂಟು. ಆದರೆ ಫೋಟೊ ಅಲ್ಬಮ್ ತಯಾರಾಗಿ ಬಂದಾಗ, ಛೇ! ಪಾಪ ಅವರ ಮೇಲೆ ಸುಮ್ಮನೆ ಕೋಪಮಾಡಿಕೊಂಡದ್ದಾಯಿತು ಎನಿಸಿತು. ನಮ್ಮ ವೀಡಿಯೋಗ್ರಾಫರ್‌ಗಳು ಮಾಡುವ ಕೈಚಳಕಗಳನ್ನು ನಾವು ಇಲ್ಲಿ ಮರೆಯುವಂತಿಲ್ಲಾ . ಹುಡುಗನ ವಾಚ್‌ನಲ್ಲಿ ಹುಡುಗಿಯ ಭಾವಚಿತ್ರ, ವಧುವಿನ ಬಿಂದಿಯಲ್ಲಿ ವರನ ಚಿತ್ರ, ಹಾಗೂ ಅಕರ್ಷಕವಾದ ಜಗತ್ತಿನ ಪ್ರಸಿದ್ಧ ಹನಿಮೂನ್ ಸ್ಪಾಟ್‌ಗಳಿಗೆ ನಮ್ಮನ್ನು ಕುಂತಲ್ಲೇ ಕರೆದ್ಯೊಯುವ ಮಹಾನುಭಾವರಿವರು. ಇಲ್ಲಿಗೆ ಚರ್ಚ್‌ನಲ್ಲಿ ನಡೆಯವ ಮದುವೆಯ ಎಲ್ಲಾ ಶಾಸ್ತ್ರಗಳು ಕೊನೆಗೊಂಡವು. ರಿಕ್ ಎಲ್ಲರಿಗೂ ೫ ಗಂಟೆಗೆ ರಿಸ್ಸೆಪ್ಷನ್ ಪಾರ್ಟಿಗೆ ರೆಸಾರ್ಟ್‌ಗೆ ಬರಲು ಹೇಳಿದ. ಮದುವೆಯೂಟ ಎಲ್ಲಿ ? ಎಂದು ಕೇಳಬೇಡಿ, ಅದಕ್ಕಾಗಿ ಸಾಯಂಕಾಲದ ರಿಸ್ಸೆಪ್ಷನ್‌ವರೆಗೆ ಕಾಯಲೇಬೇಕಾಗಿತ್ತು.

ಸಂಜೆ ಸುಮಾರು ೫:೦೦ ಗಂಟೆಗೆ ನಾವು ರೆಸಾರ್ಟ್ ಸೇರಿದೆವು. ಅಂದು ರಿಕ್ ದಂಪತಿಗಳ ಆರತಕ್ಷತೆ ಪಾರ್ಟಿ ತುಂಬಾ ವಿಭಿನ್ನವಾಗಿತ್ತು . ಏಕೆಂದರೆ ಅದೇ ದಿನದಂದು ಅಮೇರಿಕಾದ್ಯಾಂತ ‘ಹಲೋವಿನ್ ಡೇ’ ಆಚರಿಸುವ ದಿನ ಕೂಡ ಆಗಿತ್ತು . ಆದ್ದರಿಂದ ಪಾರ್ಟಿಯಲ್ಲಿ ಹಾಲೋವಿನ್ ವೇಷಭೂಷಣ ಸ್ಪರ್ಧೆಯನ್ನು ಕೂಡಾ ಹಮ್ಮಿಕೊಂಡಿದ್ದರು. ಭೂತ-ಪ್ರೇತ ಹಾಗೂ ಜನಪ್ರಿಯ ವ್ಯಕ್ತಿಗಳ ಹಾಗು ಪ್ರಸಿದ್ಧ ಸಿನಿಮಾ-ಕಾರ್ಟೂನ್ ಪಾತ್ರಗಳ ಮಾರುವೇಷದಲ್ಲಿ ಎಲ್ಲರೂ ಬರುವುದು ರೂಢಿ. ನಾವು ಪಾರ್ಟಿ ಹಾಲ್ ಮುಂದೆ ಹೋಗಿ ನಿಂತಾಗ ದೊಡ್ಡ ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಪಾರ್ಟಿಗೆ ಬರಬೇಕಾಗಿದ್ದ ಎಲ್ಲಾ ಅತಿಥಿಗಳ ಹೆಸರುಗಳು ಮತ್ತು ಅವರು ಕುಳಿತುಕೊಳ್ಳಬೇಕಾದ ಟೇಬಲ್ ನಂಬರುಗಳನ್ನು ಹಾಕಿದ್ದರು. ನಮ್ಮ ಉದ್ದುದ್ದವಾದ ಹೆಸರುಗಳನ್ನು ಆ ಬೋರ್ಡ್‌ನಲ್ಲಿ ಬರೆಯಲು ತುಂಬಾ ಕಷ್ಟಪಟ್ಟೆವೆಂದು ಅಂದು ಮುಂಜಾನೆ ಜೆಸ್ ಹೇಳಿದ ಮಾತು eಪಕಕ್ಕೆ ಬಂತು. ಅದಕ್ಕೆ ಈ ದೇಶಕ್ಕೆ ಬಂದ ನಮ್ಮವರು ಮೊದಲು ಮಾಡುವ ಕೆಲಸ ತಮ್ಮ ಹೆಸರುಗಳಿಗೆ ಕತ್ತರಿ ಹಾಕುವುದು. ಬಹುತೇಕ ಎಲ್ಲರೂ ವಿಚಿತ್ರವಾದ, ಭಯಂಕರವಾದ, ಭೂತಗಳ, ಕಳ್ಳರ, ಕಾಡುಮಾನವರ, ಬ್ಯಾಟ್‌ಮನ್‌ರ ವೇಷದಲ್ಲಿ ಬಂದಿದ್ದರು. ಬಂದವರೆಲ್ಲಾ ತಾವು ತಂದ ಗಿಫ್ಟ್‌ಗಳನ್ನು ಅವರಿಗೊಪ್ಪಿಸಿದರು.

ಮದುವೆಯಲ್ಲಿ ಅಪ್ತರು ಕೊಡುವ ಉಡುಗೊರೆಗಳು ಕೆಲವೊಮ್ಮೆ ತುಂಬಾ ಸಮಯಪ್ರಜ್ಞೆಯುಳ್ಳವಾಗಿರುತ್ತವೆ. ನನಗೆ ನನ್ನ ಮದುವೆಯಲ್ಲಿ ಬಂದ ಗಿಪ್ಟ್‌ಗಳಲ್ಲಿ ತುಂಬಾ ಇಷ್ಟವಾದವುಗಳೆಂದರೆ, ಒಂದು, ನನ್ನ ಒಬ್ಬ ಗೆಳೆಯ ಪ್ರೀತಿಯಿಂದ ಕೊಟ್ಟ ‘ಮೈಸೂರು ಮಲ್ಲಿಗೆ’ ಪುಸ್ತಕ, ಇನ್ನೊಂದು, ಮತ್ತೊಬ್ಬ ಗೆಳೆಯಕೊಟ್ಟ ಅನ್ ಕ್ಯೂಪರ್ ವಿರಚಿತ ‘ಟೆಕ್ನಿಕ್ಸ್-ಆಫ್-ಕಾಮಸೂತ್ರ’ ವೆಂಬ ಪುಸ್ತಕ. ಈ ಭೂಮಿ-ಆಕಾಶ ಇರುವವರೆಗೂ ಹೊಸದಾಗಿ ಮದುವೆಯಾದ ದಂಪತಿಗಳು ಮೈಸೂರು ಮಲ್ಲಿಗೆಯ ಒಂದೊಂದು ಸಾಲುಗಳಲ್ಲಿರುವ ಅಪ್ಸರೆಯ ಚೆಲುವನ್ನು ಆನಂದಿಸುವುದರಲ್ಲಿ ಸಂಶಯವೇ ಇಲ್ಲಾ, ಎರಡನೆಯ ಗಿಫ್ಟ್ ಬಗ್ಗೆ ನಾನು ನಿಮಗೆ ಜಾಸ್ತಿ ಹೇಳುವ ಅಗತ್ಯವಿಲ್ಲ. ಪಾರ್ಟಿಹಾಲ್‌ನ ಬಾರ್ ನಲ್ಲಿದ್ದ ಬೀರು, ರಮ್, ಜಿನ್, ವಿಸ್ಕಿ, ಸ್ಕಾಚ್, ಟಕಿಲಾ ಶಾಟ್ ಮುಂತಾದ ಮಾದಕ ದ್ರವ್ಯಗಳ ಮೇಲೆ ಸುರಾಪಾನ ಮಾಡುವ ಶೂರರು ಮುತ್ತಿಕೊಂಡರು, ಯಾವ ಪಾರ್ಟಿಗೆ ಹೋದರೂ ಈ ದಿನಗಳಲ್ಲಿ ಕಂಡವರ ಕೈಯಲ್ಲಿ ಒಂದು ಡಿಜಿಟಲ್ ಕ್ಯಾಮರಾ ಇದ್ದೇ ಇರುತ್ತೆ ನೋಡಿ. ಎಲ್ಲರೂ ತಮಗೆ ಇಷ್ಟವಾದ ವೇಷಧಾರಿಗಳೊಂದಿಗೆ ನಿಂತು ಕ್ಯಾಮರಾ ಕ್ಲಿಕ್ಕಿಸಿಕೊಂಡರು.

ನಂತರ ಎಲ್ಲರೂ ನಮಗೆ ನಿಗದಿಪಡಿಸಿದ ಟೇಬಲ್‌ಗಳಿಗೆ ಹೋಗಿ ಕುಳಿತೆವು. ಒಂದೊಂದು ರೌಂಡ್ ಟೇಬಲ್‌ಗೆ ಸುಮಾರು ಐದರಿಂದ-ಆರು ಅತಿಥಿಗಳನ್ನು ಕುಳಿತುಕೊಳ್ಳುವಂತೆ ನಿಗದಿಪಡಿಸಿದ್ದರು, ಅಂದಿನ ಪಾರ್ಟಿ ನಿರ್ವಹಣೆ ಮಾಡುತ್ತಿದ್ದ ನಿರೂಪಕ ಎಲ್ಲರನ್ನು ಸ್ವಾಗತಿಸಿದ, ಅದೇ ವೇಳೆಗೆ ರಿಕ್-ಜೆಸ್ ಪಾರ್ಟಿಹಾಲ್‌ನೊಳಗೆ ಜೊತೆಯಾಗಿ ನಡೆದುಕೊಂಡು ಬಂದರು, ಎಲ್ಲರೂ ತಮ್ಮ ತಮ್ಮ ಟೇಬಲ್‌ಗಳ ಮೇಲೆ ಇಟ್ಟಿದ್ದ ಶಾಂಫೆನ್ ಬರಿತ ಗ್ಲಾಸ್‌ಗಳನ್ನು ನವದಂಪತಿಗಳಿಗೆ ಟೋಸ್ಟ್ (ಚಿಯರ್ಸ್) ಮಾಡಿ ಗುಟುಕರಿಸಿದೆವು. ಇದಾದ ಮೇಲೆ ಒಂದು ಚಿಕ್ಕ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅದೇನೆಂದರೆ ಎಲ್ಲಾ ಟೇಬಲ್‌ಗಳ ಮೇಲೆ ೧೦ ಪ್ರಶ್ನೆಗಳಿರುವ ಪತ್ರಿಕೆಯನ್ನು ಇಟ್ಟಿದ್ದರು, ಯಾವ ಟೇಬಲ್‌ನವರು ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳನ್ನು ನೀಡುತ್ತಾರೆಯೋ ಅವರೇ ವಿಜೇತರು. ಎಲ್ಲಾ ಪ್ರಶ್ನೆಗಳು ರಿಕ್ ಮತ್ತು ಜೆಸ್‌ಗೆ ಸಂಬಂಧಪಟ್ಟ ಪ್ರಶ್ನೆಗಳಾಗಿದ್ದವು. ಉದಾಹರಣೆ...ರಿಕ್-ಜೆಸ್ ಎಲ್ಲಿ ಮೊದಲ ಬಾರಿ ಭೇಟಿಯಾದರು ? ಮೊದಲ ಡೇಟಿಂಗ್‌ಗೆ ಎಲ್ಲಿ ಹೋಗಿದ್ದರು ? ಮುಂತಾದವುಗಳು. ನಮ್ಮ ಮದುವೆಗಳಲ್ಲಾಗಿದ್ದರೆ ನಾವು ಯಾವ ತರದ ಪ್ರಶ್ನೆಗಳನ್ನು ಕೇಳಬಹುದು ಎಂದು ನಾನು ಊಹಿಸಿಕೊಂಡೆ. ಹುಡುಗಿಗೆ ಎಷ್ಟು ತೊಲ ಬಂಗಾರ ಹಾಕಿದ್ದಾರೆ ? ಹುಡುಗನಿಗೆ ಎಷ್ಟು ವರದಕ್ಷಿಣೆ ಕೊಟ್ಟಿದ್ದಾರೆ? ಯಾವ ಮದುವೆ ಬ್ರೋಕರ್ ಸಂಬಂಧ ಮಾಡಿಸಿದ್ದು? ಇವೇ ಕೆಲವು ಪ್ರಮುಖ ಪ್ರಶ್ನೆಗಳಾಗಬಹುದು, ಅಲ್ಲವೇ ?

ರಿಕ್ ಮತ್ತು ಜೆಸ್ ಸ್ಟೇಜ್ ಮೇಲೆ ಬಂದು ಇಬ್ಬರು ಒಟ್ಟಿಗೆ ಮದುವೆಯ ಕೇಕ್ ಕಟ್‌ಮಾಡಿದರು, ಅದಾದ ನಂತರ ನವದಂಪತಿಗಳು ಬ್ರಿಯಾನ್ ಆಡಮ್ಸ್‌ನ ‘ಹೆವನ್’ ಎಂಬ ಪ್ರಣಯಭರಿತ ಹಾಡಿಗೆ ತಮ್ಮ ದಾಂಪತ್ಯಜೀವನದ ಮೊದಲ ನೃತ್ಯ ಮಾಡಿದರು. ಅದಾದ ಮೇಲೆ ನಾನು ಅಷ್ಟೊತ್ತು ಕಾಯುತ್ತಿದ್ದ ರುಚಿಯಾದ ಮದುವೆಯೂಟ ಬಂದಿತು. ಊಟದ ಬಳಿಕ ಡಾನ್ಸ್ ಫ್ಲೋರ್ ಮೇಲೆ ಬಂದ ಅತಿಥಿಗಳೆಲ್ಲಾ ತಮ್ಮ ಜೊತೆಗಾರರೊಂದಿಗೆ ಸುಮಾರು ಹೊತ್ತು ಡಾನ್ಸ್ ಮಾಡಿದರು. ಇಲ್ಲಿಯ ಮದುವೆಗಳು ನವವಧು ತನ್ನ ಕೈಯಲ್ಲಿರುವ ಹೂಗುಚ್ಛ ಎಸೆಯುವ ಪದ್ಧತಿ ಇಲ್ಲದೆ ಪೂರ್ತಿಯಾಗುವುದಿಲ್ಲ . ಈ ಶಾಸ್ತ್ರದಲ್ಲಿ ವಧು ತನ್ನ ಕೈಯಲ್ಲಿರುವ ಹೂವಿನ ಗುಚ್ಛ ಎಸೆಯುತ್ತಾಳೆ. ಅದನ್ನು ಹಿಡಿಯಲು ಮದುವೆಯಾಗದ ಕುಮಾರಿಗಳು ನಿಲ್ಲುತ್ತಾರೆ. ಯಾವ ಕುಮಾರಿಗೆ ಆ ಹೂ ದೊರಕುತ್ತದೆಯೋ ಅವಳಿಗೆ ಶೀಘ್ರವೇ ಕಂಕಣ ಬಲ ಕೂಡಿಬರುವುದು ಎಂಬ ಪ್ರಾಚೀನ ನಂಬಿಕೆಯುಂಟು. ಈ ಶಾಸ್ತ್ರ ಮುಗಿದ ಮೇಲೆ ಅಂದಿನ ವೇಷಭೂಷಣ ಸ್ಪರ್ಧೆಯ ಫಲಿತಾಂಶದ ಸಮಯ. ‘ಭಯಬರಿತ-ವೇಷ’ದ ವಿಭಾಗದಲ್ಲಿ ಕಳ್ಳರ ವೇಷದಲ್ಲಿ ಬಂದ ಒಂದು ಮೆಕ್ಸಿಕನ್ ಜೋಡಿಗೆ ಬಹುಮಾನ ಕೊಟ್ಟರು. ‘ಅಂದವಾದ-ಉಡುಗೆ’ ವಿಭಾಗದಲ್ಲಿ ವಿಜೇತರ ಹೆಸರನ್ನು ಕೂಗಿದಾಗ ನಮಗೆ ಪರಮಾಶ್ಚರ್ಯವಾಯಿತು, ಏಕೆಂದರೆ ಆ ಪ್ರಶಸ್ತಿ ಬಂದಿದ್ದು ನಮಗೆ. ಭಾರತೀಯ ನಾರಿಯರ ‘ಸೀರೆ’ ಹಾಗು ಭಾರತೀಯ ಪುರುಷರ ‘ಶೆರ್‌ವಾಣಿ’ ಗಳನ್ನು ಎಲ್ಲರೂ ತುಂಬಾ ಇಷ್ಟಪಟ್ಟರು. ಮುಂದಿನ ಸಲ ಭಾರತಕ್ಕೆ ಹೋದಾಗ ನಮಗೂ ಒಂದು ಜೊತೆ ತರುವಿರಾ ? ಎಂಬ ಸುಮಾರು ಕೋರಿಕೆಗಳು ಬಂದವು. ವ್ಯಾಪಾರ ಮಾಡುವವರಿಗೆ ಒಳ್ಳೆಯ ವ್ಯಾಪಾರದ ಅವಕಾಶ ಎಂದು ನಾನು ಮನಸ್ಸಲ್ಲೇ ಅಂದುಕೊಂಡೆ.

ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ರಿಕ್ ಮತ್ತು ಜೆಸ್ ಧನ್ಯವಾದ ಹೇಳುವುದರೊಂದಿಗೆ ಮದುವೆಯ ಸಂಭ್ರಮಕ್ಕೆ ಅಂತಿಮ ತೆರೆ ಬಿದ್ದಿತು. ನಾವು ಮತ್ತೊಮ್ಮೆ ರಿಕ್-ಜೆಸ್ ದಂಪತಿಗಳಿಗೆ ಶುಭಾಶಯ ಹೇಳಿ, ‘ಮದುವೆಯ ಈ ಬಂಧ....ಅನುರಾಗದ ಅನುಬಂಧ..’ ಹಾಡನ್ನು ಗುನುಗುತ್ತಾ ನಮ್ಮ ಕಾರಿನಲ್ಲಿ ಕುಳಿತು ಮನೆಯ ಹಾದಿ ಹಿಡಿದೆವು.


‘ನನ್ನ ಮದುವೆಯ ನಿಶ್ಚಿತಾರ್ಥ ಇಂಟರ್ನೆಟ್ ಮೂಲಕ ನಡೆಯಿತು...’

* ಮಲ್ಲಿ ಸಣ್ಣಪ್ಪನವರ್, sannams@hotmail.com

ಮದುವೆಯ ‘ಇ’ ಬಂಧ : ಹೌದು, ಇದು ಅಂತರ್ಜಾಲದ ಅನುಬಂಧ ; ವಿವಾಹಪೂರ್ವದ ನಿಶ್ಚಿತಾರ್ಥ ಸಂಬಂಧ. ಬಹುಶಃ ಇದು, ಇಂಟರ್ನೆಟ್ ಮಾಯಾಜಾಲದ ಮೂಲಕ ನಡೆದ ಮೊದಲ ನಿಶ್ಚಿತಾರ್ಥವೂ ಇರಬಹುದು. ವಧು ಮತ್ತು ವರ ನ್ಯೂಯಾರ್ಕ್‌ನ ಮನೆಯಲ್ಲಿ , ಪೋಷಕರು- ಬಂಧುಮಿತ್ರರು ಬೆಂಗಳೂರಲ್ಲಿ . ಇಂಥದೊಂದು ಅಪರೂಪದ ಇ-ನಿಶ್ಚಿತಾರ್ಥಕ್ಕೆ ಒಳಗಾದ ಮದುಮಗ, ತನ್ನ ಅನುಭವವನ್ನು ಅಕ್ಷರ ರೂಪಕ್ಕಿಳಿಸಿದಾಗ...... ಆ ರೋಚಕ ಕ್ಷಣಗಳ ಕಥನ.

ಮುಂಜಾನೆ ಪೇಪರ್ ಹಾಕುವ ಹುಡುಗನ ಹಾದಿಯನ್ನೇ ಕಾಯುತ್ತಿದ್ದ ದಿನಗಳವು. ಮುಖಪುಟಕ್ಕಾಗಿ, ಸ್ಪೋರ್ಟ್ಸ್ ಪೇಜ್‌ಗಾಗಿ, ಸಿನಿಮಾ ಪುಟಕ್ಕಾಗಿ ಮನೆಯವರೆಲ್ಲಾ ಜಗ್ಗಾಟ-ಕೂಗಾಟ ಮಾಡುತ್ತಿದ್ದ ದಿನಗಳು. ಆ ದಿನಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇಂಟರ್‌ನೆಟ್ ಇಲ್ಲದ್ದಿದ್ದರೆ ದೇಶಬಿಟ್ಟು ಬಂದಂಥ ನನ್ನಂತವರ ಸ್ಥಿತಿ ತುಂಬಾ ಕಷ್ಟವಾಗುತ್ತಿತ್ತೇನೋ!
ಬೆಳಗ್ಗೆ ಎದ್ದ ಕೂಡಲೇ ಓಡುವ ಕೆಲವರನ್ನು ನೋಡಿದ್ದೇನೆ. ಬಾತ್‌ರೂಮ್ ಕಡೆಗಲ್ಲಾ ಅವರು ಓಡುವುದು- ಇ-ಮೇಲ್ ಚೆಕ್ ಮಾಡಲು ಕಂಪ್ಯೂಟರ್ ಕಡೆಗೆ. ತುಂಬಾ ಜನ ಹೀಗೆ ಈ ಅಂತರ್‌ಜಾಲವನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆ. ಇದನ್ನು ‘ಇಂಟರ್‌ನೆಟ್ ಅಡಿಕ್ಷನ್’ ಎಂದು ಕರೆಯಬಹುದು. ನನ್ನ ಮಿತ್ರನೊಬ್ಬ ತನ್ನ ಒಂದು ತಿಂಗಳ ಮಗು ರಾತ್ರಿ ಎದ್ದು ಅಳುತ್ತಿದ್ದರೆ ಮಗುವನ್ನು ಮಲಗಿಸುವ ಉಪಾಯಗಳಿಗೆ ಇಂಟರ್‌ನೆಟ್‌ನ ಬಾಗಿಲು ಬಡಿಯುತ್ತಾನೆ. ಅದೇ ನಮ್ಮ ಹಳ್ಳಿಯಾಗಿದ್ದರೆ ಸೂಲಗಿತ್ತಿಯಾದ ಸೋಮಜ್ಜಿಯ ಅಥವಾ ಘಾಟಿವೈದ್ಯೆ ಗಂಗಜ್ಜಿಯ ಮನೆಯ ಬಾಗಿಲು ಬಡಿಯುತ್ತಿದ್ದರು. ಮುಂದೆ ಬರುವ ದಿನಗಳಲ್ಲಿ ಈ ಸೋಮಜ್ಜಿ-ಗಂಗಜ್ಜಿಯರ ನುರಿತ ಸಲಹೆಗಳನ್ನು ಕೇಳುವವರೇ ಇಲ್ಲವಾಗಬಹುದೇನೋ. ಹತ್ತುವರ್ಷಗಳ ಹಿಂದೆ ಹುಡುಗಿಯರಿಗೆ ಲವ್‌ಲೆಟರ್ ಕೊಡಲು ತಿಣುಕಾಡುತ್ತಿದ್ದ ದಿನಗಳ ಈಗೆಲ್ಲಿ ಬರಬೇಕು? ಅಂದಿನ ಶಾಲಾದಿನಗಳಂತೆ ಲೀಜರ್ ಬಿಡುವುದನ್ನೇ ಕಾಯ್ದು ಹುಡುಗಿಯರ ಪಸ್ಂನಲ್ಲಿ, ಕಂಪಾಸ್ಸು ಬಾಕ್ಸ್‌ಗಳಲ್ಲಿ ಲವ್‌ಲೆಟರ್ ಇಡಲು ಕಾಯುವ ಹುಡುಗರು ಈಗ ವಿರಳ. ಇಂದು ಇ-ಮೇಲ್, ಇ-ಗ್ರೀಟಿಂಗ್ಸ್, ಇ-ಗಿಫ್ಟ್, ಇ-ಟಿಕೆಟ್ , ಇ-ಪ್ರೆಂಡ್ಸ್, ಇ-ಡೇಟಿಂಗ್, ಇ-ರೋಮ್ಯಾನ್ಸ್... ಎಲ್ಲಾ ಕಾರ್ಯಗಳು ಇ-ಮಯವಾಗಿವೆ. ಅಂದಹಾಗೆ, ನಾನೀಗ ಹೇಳ ಹೊರಟಿರುವುದು ಇದೇ ‘ಇ’ ಕಾರದ, ಇ-ಕಾರ್ಯದ ಬಗೆಗೆ.
ಲೋಕವೆಲ್ಲಾ ಇ-ಮಯವಾಗಿರುವಾಗ, ಇದೇ ಲೋಕದಲ್ಲಿರುವ ನಾನು ಕೂಡಾ ಇದಕ್ಕೆ ಹೊರತಾಗಿಲ್ಲ । ನಾನು ನನಗೆ ಬೇಕಾದಷ್ಟು ಇ-ಕಾರ್ಯಗಳನ್ನು (ಇ-ಮೇಲ್, ಇ-ಗ್ರೀಟಿಂಗ್ಸ್, ಇ-ಗಿಪ್ಟ್, ಇ-ಟಿಕೆಟ್ ಇತ್ಯಾದಿ..... ನೀವು ಜಾಸ್ತಿ ಉಹಿಸಿಕೊಳ್ಳಬೇಡಿ!!!) ನಿಯಮಿತವಾಗಿ ಮಾಡುತ್ತಾ ಇರುತ್ತೇನೆ . ಇತ್ತೀಚಿಗೆ ಈ ಪಟ್ಟಿಗೆ ಇನ್ನೊಂದು ಹೊಸ ಇ-ಕಾರ್ಯವೂ ಸೇರಿಕೊಂಡಿದ್ದು ಹೀಗೆ...

ಮಾರ್ಚ್‌ನಲ್ಲಿ ನಮ್ಮ ಮನೆಯವರು ಮತ್ತು ಅವಳ ಮನೆಯವರು ಮಾತುಕತೆ ಮುಗಿಸಿ ಮದುವೆಗೆ ‘ಗ್ರೀನ್ ಸಿಗ್ನಲ್’ ಕೊಟ್ಟಾಯ್ತು । ಆದರೆ ಪುರೋಹಿತರು ಗಳಿಗೆಯನ್ನು ಕೂಡಿಸಿ ನೋಡಿದಾಗ ಮದುವೆ ದಿವಸ ಅಗಸ್ಟ್ ಕೊನೆಯವರಗೆ ಹೋಯಿತು. ಅದಕ್ಕೆ ಅವರು ಸದ್ಯಕ್ಕೆ ನಿಶ್ಚಿತಾರ್ಥ (‘ಎಂಗೇಜ್‌ಮೆಂಟ್’) ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ನಾವಿಬ್ಬರು ಅಲ್ಲಿ ಇಲ್ಲದೆ ಅವರಷ್ಟಕ್ಕೆ ಅವರೇ ಸೇರಿಕೊಂಡು (ನಾನು ಮತ್ತು ಅವಳು ಇಬ್ಬರೂ ಇಲ್ಲಿ , ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದೇವೆ) ಎಂಗೇಜ್‌ಮೇಂಟ್ ಮಾಡುವುದಕ್ಕೆ ಬೇಸರಪಟ್ಟುಕೊಳ್ಳುತ್ತಿದ್ದರು. ಆಫೀಸ್‌ನಲ್ಲಿ ಇಬ್ಬರಿಗೂ ಎಂಗೇಜ್‌ಮೇಂಟ್‌ಗೊಮ್ಮೆ-ಮದುವೆಗೊಮ್ಮೆ ಎರಡು ಸಾರಿ ರಜೆ ಸಿಗುವುದು ಕಷ್ಟಕರವಾಗಿತ್ತು. ಆಗ ನನಗೆ ತಟ್ಟನೆ ಹೊಳೆದದ್ದು ‘ಇ-ಎಂಗೇಜ್‌ಮೆಂಟ್’! ಬೆಂಗಳೂರಿನಲ್ಲಿರುವ ನನ್ನ ಸಹೋದರಿಗೆ ಮತ್ತು ನನ್ನ ಸ್ನೇಹಿತರಿಗೆ ‘ಇ-ಎಂಗೇಜ್‌ಮೆಂಟ್’ ಬಗೆಗೆ ಹೇಳಿದಾಗ ಅವರು ತುಂಬಾ ಉತ್ಸಾಹ ತೋರಿಸಿದರು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತೇವೆ, ನೀನು ಅದರ ಚಿಂತೆ ಬಿಡು ಎಂದರು. ಎಷ್ಟೇ ಆದರೂ ಸಿಲಿಕಾನ್‌ಸಿಟಿಯಲ್ಲಿ ಇರುವವರು ನೋಡಿ! ಅವರಿಗೆ ಜಾಸ್ತಿ ಹೇಳಬೇಕಾಗಿಲ್ಲವಲ್ಲ . ಕೊನೆಯವರೆಗೂ ಈ ವಿಚಾರವನ್ನು ಗುಪ್ತವಾಗಿ ಇಡಲು ನಿರ್ಧರಿಸಿದೆವು. ಏಕೆಂದರೆ ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುವುದೆಂದು ನಮಗೆ ಲೆಕ್ಕಹಾಕುವುದು ಕಷ್ಟವಾಗಿತ್ತು.
ನಿಗದಿಪಡಿಸಿದ ನಿಶ್ಚಿತಾರ್ಥದ ದಿನ- ಮೇ ೨, ೨೦೦೪ರ ಮಧ್ಯಾಹ್ನ ೧೨:೩೦ ಗಂಟೆಗೆ ಅದು ಭಾರತೀಯ ಕಾಲಮಾನದ ಪ್ರಕಾರ, ಆದರೆ ನ್ಯೂಯಾರ್ಕ್ ವೇಳೆಯ ಪ್ರಕಾರ ನಮಗೆ ಮೇ ೨, ೨೦೦೪ರ ಬೆಳಗಿನ ಜಾವ ೩:೦೦ ಗಂಟೆ, ರಾತ್ರಿಯೆಲ್ಲಾ ಜಾಗರಣೆ ಮಾಡುವುದು ನಮಗೆ ಕಷ್ಟದ ಕೆಲಸವಾಗಲಿಲ್ಲ । ಏಕೆಂದರೆ ಸುಮಾರು ೧೦ ಗೆಳೆಯರು ನಮಗಿಂತ ಜಾಸ್ತಿ ಉತ್ಸಾಹದೊಂದಿಗೆ ಈ ಹೊಸ ‘’ಇ-ಕಾರ್ಯ’ ನೋಡುವುದಕ್ಕಾಗಿ ಕಾಯುತ್ತಿದ್ದರು. ಹರಟೆಯಲ್ಲಿ ಮಗ್ನರಾಗಿದ್ದ ನಮಗೆ ಸುಮಾರು ೩:೦೦ ಗಂಟೆಗೆ ಇವಳ ಸಹೋದರ ಭಾರತದಿಂದ ಪೋನ್ ಕರೆ ಮಾಡಿ, ‘ಬೇಗ ರೆಡಿಯಾಗಿ ಬನ್ನಿ, ಇಲ್ಲಿ ಎಲ್ಲಾ ನಿಮಗೊಸ್ಕರ ಕಾಯುತ್ತಾ ಇದ್ದಾರೆ’ ಎಂದಾಗ ನನಗೆ ಒಂದು ಕ್ಷಣ ಬೆಂಗಳೂರಿನಲ್ಲೇ ಇದ್ದ ಅನುಭವವಾಯಿತು. ಮೊದಲೇ ಹೇಳಿದ ಪ್ರಕಾರ ನನ್ನ ಸಹೋದರಿ ಮತ್ತು ನನ್ನ ಸ್ನೇಹಿತರು ಎಂಗೇಜ್‌ಮೇಂಟ್ ನಡೆಯುತ್ತಿದ್ದ ಹಾಲ್‌ನಲ್ಲಿ ಕಂಪ್ಯೂಟರ್ ತಂದು ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಿಕೊಂಡು ನಮಗೊಸ್ಕರ ನೆಟ್‌ನಲ್ಲಿ ಕಾಯುತ್ತಿದ್ದರು. ತಕ್ಷಣ ನಾವು ಕೂಡಾ ನಮ್ಮ ಕಂಪ್ಯೂಟರ್‌ನ್ನು ಇಂಟರ್-ನೆಟ್‌ಗೆ ಕನೆಕ್ಟ್ ಮಾಡಿದೆವು, ‘ಯಾಹೊ’, ‘ಎಂ।ಎಸ್.ಎನ್’ ಹರಟೆಕಿಟಕಿಗಳ ಮೂಲಕ ಬೆಂಗಳೊರಿಗೆ ಸಂಪರ್ಕ ಕಲ್ಪಿಸಿಕೊಂಡೆವು. ಅದಾದ ಮೇಲೆ ‘ನಿಮ್ಮ ಕ್ಯಾಮರಾ ಆನ್ ಮಾಡಿಕೊಳ್ಳಿ’ ಎಂಬ ಬರಹ ಸಂದೇಶ ಅವರಿಂದ ಬಂದಿತು. ನಾವು ಕ್ಯಾಮರಾ ಆನ್ ಮಾಡಿದ ತಕ್ಷಣ ಅಷ್ಟೊತ್ತು ನಮಗಾಗಿ ಹಾಲ್‌ನಲ್ಲಿ ಕಾಯ್ದು ಕುಳಿತಿದ್ದ ನಮ್ಮ ಸುಮಾರು ೨೦೦ ಜನ ಸಂಬಂಕರು ಹಾಗೂ ಸ್ನೇಹಿತರು ನಮ್ಮ ಮುಖಗಳನ್ನು ಕಂಪ್ಯೂಟರ್‌ನಲ್ಲಿ ನೋಡುತ್ತಿದ್ದ ಹಾಗೆ ಕೂಗು ಮತ್ತು ಚಪ್ಪಾಳೆಗಳ ಮೂಲಕ ನಮ್ಮನ್ನು ಸ್ವಾಗತಿಸಿದರು. ಆ ಕ್ಷಣದ ಚಪ್ಪಾಳೆ-ಗಲಾಟೆ ಇಂದು ಕೂಡಾ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಬೆಂಗಳೂರಿನಿಂದ ಪುರೋಹಿತರ ಮಂತ್ರಗಳು ಜೋರಾಗಿ ಕೇಳಲಾರಂಭಿಸಿದವು, ಅದುವರೆಗೂ ಅವಳ ಕಡೆ ಸಂಬಂಕರನ್ನು ನಾನು, ನನ್ನ ಕಡೆ ಸಂಬಂಕರನ್ನು ಅವಳು ನೋಡಿರಲಿಲ್ಲ । ಹಾಗಾಗಿ ಶುರುವಾಯಿತು ನೋಡಿ ‘ಇ-ಇಂಟ್ರೊಡಕ್ಷನ್’ ವಿಭಾಗ. ನಾನೆಂದೆ, ‘ಇವಳು ನಮ್ಮತ್ತೆ ತಂಗಿಯ ಭಾವನ ಅಕ್ಕನ ಗಂಡನ ಸೊಸೆ’. ಅವಳೆಂದಳು, ‘ಇವನು ನಮ್ಮಜ್ಜನ ತಾಯಿಯ ಗಂಡನ ಅಣ್ಣನ ಮಗನ ಬಾಮೈದ’. ಹೀಗೆ ಸ್ವಲ್ಪ ಹೊತ್ತು ಸಂಬಂಕರ ಸಂಬಂಧಗಳ ಸಮೀಕರಣಗಳನ್ನು ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸಿ ಸುಸ್ತಾಗಿ ಸುಮ್ಮನಾದೆವು. ಇಲ್ಲಿರುವ ನಮ್ಮ ಸ್ನೇಹಿತರೆಲ್ಲಾ ಅಲ್ಲಿಂದ ಬರುತ್ತಿದ್ದ ಅಚ್ಚುಕಟ್ಟಾದ ನೇರ ಪ್ರಸಾರವನ್ನು ನೋಡಿ ಆಶ್ಚರ್ಯಪಟ್ಟರು, ನಮ್ಮೆಲ್ಲರಿಗೂ ಇದೆಲ್ಲಾ ಒಂದು ರೀತಿಯ ಅಪರೂಪದ ಹೊಸ ಅನುಭವದ ಕ್ಷಣಗಳಾಗಿದ್ದವು ಎಂದರೆ ತಪ್ಪಾಗಲಾರದು.

ನಮ್ಮ ಹೆತ್ತವರು ಫಲತಾಂಬೂಲಗಳನ್ನು ವಿನಿಮಯ ಮಾಡಿಕೊಂಡರು. ನನಗೆ ಉಡುಗೊರೆಯಾಗಿ ಬಂದ ಬಟ್ಟೆಯನ್ನು, ಅವಳಿಗೆ ಬಂದ ಸೀರೆ, ಬಳೆ, ಆಭರಣಗಳನ್ನು ಕ್ಯಾಮರಾದಲ್ಲಿ ಡಬ್ಬಲ್ ಫೋಕಸ್ ಮಾಡಿ ನಮ್ಮ ಸಮಾಧಾನಕ್ಕಾಗಿ ತೋರಿಸುವುದನ್ನು ಅವರು ಮರೆಯಲಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಸಾಲಾಗಿ ಕ್ಯಾಮರಾದ ಮುಂದೆ ಬಂದು ಫೋಸ್ ಕೊಟ್ಟರು. ಸಮತೋಲನವಾಗಿ ಇಲ್ಲಿ ನಮ್ಮ ‘ಇ-ಇಂಟ್ರೊಡಕ್ಷನ್’ ಕಾರ್ಯಕ್ರಮ ಸಾಗಿತ್ತು . ಆಮೇಲೆ ಬಂದ ವರದಿಗಳ ಪ್ರಕಾರ ಕೆಲವೊಂದಿಷ್ಟು ಸಂಬಂಕರು ಕಂಪ್ಯೂಟರ್‌ಗೆ ಅಕ್ಷತೆ ಹಾಕಿ, ಕುಂಕುಮ ಹಚ್ಚಿ ಆರತಿ ಬೆಳಗಿ ಸಂತೋಷ ಪಟ್ಟರಂತೆ. ನಾವು ಕೂಡಾ ಇಲ್ಲಿಂದ ನಿಯಮಿತವಾಗಿ ನಮಸ್ಕಾರಗಳನ್ನು ಮಾಡಿದೆವೆನ್ನಿ . ‘ನಿನ್ನ ಸೀರೆ ಕಲರ್ ಚೆನ್ನಾಗಿದೆ’, ‘ಹೇರ್ ಸ್ಟೈಲ್ ಚೆನ್ನಾಗಿದೆ’, ‘ಬಳೆಗಳು ಚೆನ್ನಾಗಿವೆ’..... ಹೀಗೆ ಹೆಂಗಸರ ಮಾಮೂಲಿ ಮಾತುಕತೆ ಇ-ಮಯವಾಗಿತ್ತು.
ಅಲ್ಲಿಯವರೆಗೂ ವೀಕ್ಷಕರಾಗಿದ್ದ ನಾವು ಪುರೋಹಿತರ ಆದೇಶದಂತೆ ಒಬ್ಬರಿಗೊಬ್ಬರು ಕುಂಕುಮ ಹಚ್ಚಿ, ಸಿಹಿಯನ್ನು ಹಂಚಿಕೊಂಡೆವು. ನಂತರ ಉಂಗುರ ವಿನಿಮಯ ಮಾಡಿಕೊಂಡೆವು. ಎಲ್ಲರಿಗೂ ಕ್ಯಾಮರಾ ಕಿಂಡಿಯಿಂದ ಇ-ಪುರೋಹಿತರ ಆದೇಶದಂತೆ ನಮಸ್ಕಾರ ಮಾಡಿದೆವು. ಕಿರಿಯರಿಗೆ ಕೈ ಬೀಸಿದೆವು. ಪ್ರತಿಹಂತದಲ್ಲೂ ಚಪ್ಪಾಳೆಯಿಂದ ನಮ್ಮನ್ನು ಆ ಕಡೆಯಿಂದ ಎಲ್ಲರೂ ಹುರಿದುಂಬಿಸಿದರು. ಅಂದು ಎಲ್ಲರಿಂದ ದೂರವಿದ್ದಂತೆ ನಮಗೆ ಅನಿಸಲೇ ಇಲ್ಲ . ಅಲ್ಲಿಯವರ ಪ್ರಕಾರ ಒಂದು ವೇಳೆ ನಾವು ಖುದ್ದಾಗಿ ಅಲ್ಲಿಗೆ ಹೋಗಿದ್ದರು ಕೂಡಾ ಇಷ್ಟೊಂದು ಕುತೂಹಲ ಭರಿತ ರೊಮಾಂಚನಕಾರಿ ನಿಶ್ಚಿತಾರ್ಥ ಆಗುತ್ತಿರಲ್ಲಿಲ್ಲವಂತೆ.
ಅಂದು ನಮ್ಮೊಂದಿಗೆ ಇದ್ದ ಇಲ್ಲಿನ ಸ್ನೇಹಿತರ ಹಾಗೂ ಅಂದು ನಮ್ಮೆಲ್ಲರಿಗೆ ಹಿರಿಯರಾಗಿ ಮಾರ್ಗದರ್ಶನ ಮಾಡಿದ ಸುಶ್ಮಾ ಆಂಟಿಯ ಸಹಾಯವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ . ನಾನು ‘ಇ-ಎಂಗೇಜ್‌ಮೇಂಟ್’ನ ಒಂದು ಚಿಕ್ಕ ಪಾತ್ರಧಾರಿಯಾಗಿದ್ದೆ ಮಾತ್ರ. ಆದರೆ ಅದರ ನಿಜವಾದ ಯಶಸ್ಸಿನ ಪಾಲು ನನ್ನ ಸಹೋದರಿ, ನಮ್ಮ ಕಾರ್ಯಕ್ಕೆ ಸಹಾಯ ಮಾಡಿದ ಸ್ನೇಹಿತರಿಗೆ ಸಲ್ಲುತ್ತದೆ. ಅಂತರ್‌ಜಾಲದಲ್ಲಿ ಪುಕ್ಕಟೆಯಾಗಿ ಸಿಗುವ ‘ಯಾಹೊ’ ಮತ್ತು ‘ಎಂ.ಎಸ್.ಎನ್’ ಹರಟೆ ಕಿಡಕಿಗಳ ಪಾತ್ರವನ್ನು ಕೂಡಾ ನಾವು ಮರೆಯುವಂತಿಲ್ಲ.
ನೀವು ಕೂಡಾ ಮನೆಯವರಿಂದ ದೂರ ಇರುವಿರಾ ? ನಿಮ್ಮ ಮಗನ ಹುಟ್ಟುಹಬ್ಬವಿದೆಯಾ ? ನಿಮ್ಮ ಮಡದಿಯ ಸೀಮಂತವಿದೆಯಾ ? ನಿಮ್ಮ ಮನೆಯಲ್ಲಿ ಸಂಭ್ರಮದ ಸಮಯವೇ ? ನಿಮ್ಮ ಮನೆಯವರೆಲ್ಲಾ ನಿಮ್ಮೊಂದಿಗೆ ಈ ಸಂತೋಷದ ಕ್ಷಣಗಳಲ್ಲಿ ಜೊತೆಗಿಲ್ಲ ಎಂಬ ಕೊರಗು ನಿಮಗಿದೆಯಾ ? ಹಾಗಾದರೆ ನಿಮ್ಮ ಮುಂದೆ ಇರುವ ಕೆಲವೇ ದಾರಿಗಳಲ್ಲಿ ‘ಇ-ಕಾರ್ಯ’ ಕೂಡಾ ಒಂದು. ನಿಮ್ಮ ಮನೆಯ ಇ-ಮಯವಾದ ಸಂದರ್ಭಗಳನ್ನು ಮತ್ತು ನಿಮ್ಮ ‘ಇ-ಆಶೀರ್ವಾದ’, ‘ಇ-ಅಭಿಪ್ರಾಯ’ಗಳನ್ನು ‘ಇ-ಮೇಲ್’ ಮೂಲಕ ನಮಗೆ ತಿಳಿಸಿ. (sannams@hotmail.com)ಸುಖಪುರುಷನ ನಾಲ್ಕು ಸೂತ್ರಗಳು

ಅಮೆರಿಕಾದಲ್ಲಿ ಕೆಲಸ ಮಾಡುವ ಒಂದಷ್ಟು ವಿದೇಶೀ ಮನಸ್ಸುಗಳು ಬೆರೆಯುವ ಪರಿ ಹೇಗಿದ್ದೀತು? ಎರಡು ಹೆಸರಿಟ್ಟುಕೊಂಡ ಒಬ್ಬ ಚೀನೀಯ, ಅಮೆರಿಕನ್ ಲಾಭದ ಲೆಕ್ಕಾಚಾರ ಹಾಕುವ ವಿದ್ಯಾರ್ಥಿ- ಇವರ ನಡುವೆ ಭಾರತನಾರಿಯ ಹುಡುಕಾಟದಲ್ಲಿರುವ ಭಾರತೀಯ ಹಾಗೂ ಈತನ ಸುಖಸೂತ್ರ !


-- ಮಲ್ಲಿ ಸಣ್ಣಪ್ಪನವರ್sannams@hotmail.com

ನಾನು ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಾ ಇರುತ್ತಾನೆ ನನ್ನ ಚೈನೀಸ್ ರೂಮ್ಮೇಟ್। ಅವನ ಹೆಸರು `ಮೀಂಗ್ ಚಾ'। `ಪೀಟರ್' ಅನ್ನೋದೂ ಅವನ ಹೆಸರೇ। ಅವನ್ಯಾಕೆ ಎರಡು ಹೆಸರು ಇಟ್ಟುಕೊಂಡ್ಡಿದ್ದಾನೆ ಎಂದು ನೀವು ಕೇಳಬಹುದು. ಚೈನಾದಿಂದ ಅಮೆರಿಕಾಗೆ ಬರುವ ಬಹಳಷ್ಟು ಮಂದಿ ಹೆಸರನ್ನು ಬದಲಾಯಿಸುವುದು ರೂಢಿ. ಕಾರಣ- ಅಮೆರಿಕಾದವರಿಗೆ ಇವರ ಹೆಸರನ್ನು ಉಚ್ಚಾರ ಮಾಡುವುದು ಸ್ವಲ್ಪ ಕಷ್ಟ ಎಂಬುದು ಇವರ ವಾದ. ಅವರಷ್ಟೇ ಏಕೆ ? ನಮ್ಮ ದೇಶಿಯರೇನು ಕಮ್ಮಿ ಇಲ್ಲ, ನಮ್ಮ `ಜೈಕಿಶನ್' ಇಲ್ಲಿಗೆ ಬಂದು `ಜಾಕ್ಸನ್' ಆಗುತ್ತಾನೆ, `ಹರೀಶ' `ಹ್ಯಾರಿ' ಆಗುತ್ತಾನೆ, ಅಷ್ಟೇ ಏಕೆ ಬಸಪ್ಪ ಇಲ್ಲಿ bus ಆಗುವುದೂ ಉಂಟು! ಕೆಲವು ಸನ್ನಿವೇಶಗಳಲ್ಲಿ ಇದು ವಿಪರೀತಕ್ಕೆ ಹೋಗುತ್ತದೆ। ಉದಾಹರಣೆಗೆ ನನ್ನ ಒಬ್ಬ ಸಹಪಾಠಿಯ ಹೆಸರು `ವಿಶ್ವನಾಥ್'. ಆದರೆ ಇಲ್ಲಿಗೆ ಬಂದ ಮೇಲೆ ಅವನು ಹೆಸರನ್ನು `ವಿಷ್' ಅಂತ ಬದಲಿಸಿಕೊಂಡಿದ್ದಾನೆ. ಇದನ್ನು ಹಿಂದಿಗೆ ಅನುವಾದಿಸಿದಾಗ ಇದರ ಅರ್ಥ `ವಿಷ' ಎಂದಾಗುವುದು ತುಂಬಾ ವಿಷಾದದ ಸಂಗತಿ. ಈ ಹೆಸರುಗಳ ಗೊಂದಲ ಬಿಟ್ಟು ನಮ್ಮ ಮೂಲ ವಿಷಯಕ್ಕೆ ಬರೋಣ.

`ಮೀಂಗ್ ಚಾ' ನನ್ನನ್ನು ಇಷ್ಟು ಕಾತರದಿಂದ ಏಕೆ ಕಾಯುತ್ತಾ ಇರುತ್ತಾನೆ ? ಎಂದು ನೀವು ನಿಮ್ಮ ಉಹಾಪೋಹದ ಹಕ್ಕಿಯ ಗರಿ ಬಿಚ್ಚುವ ಮುಂಚೆ ನಾನೇ ಹೇಳಿ ಬಿಡುತ್ತೇನೆ। ಇವನಿಗೆ ಭಾರತದ ಇತಿಹಾಸ-ಜಾತಿ-ರಾಜಕೀಯ-ಸಿನಿಮಾ ಹೀಗೆ ಎಲ್ಲದ್ದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಒತ್ತಾಸೆ. ಒಂದು ಕೆಮಿಕಲ್ ಕಂಪನಿಯಲ್ಲಿ ಈತ ಒಬ್ಬ ಕೆಮಿಸ್ಟ್. ನಮ್ಮ ಸಾಫ್ಟ್ ವೇರ್ ಕಂಪನಿ ಕೆಲಸದ ಥರ ಅಷ್ಟೊಂದು ಒತ್ತಡ ಅವನಿಗೆ ಇರುವುದಿಲ್ಲ. ಆದ್ದರಿಂದ ಸಂಜೆ ೬ ಗಂಟೆಗೆ ಸರಿಯಾಗಿ ಅವ ಮನೆಗೆ ಹಾಜರ್. ನಮ್ಮ ಕಲ್ಚರಲ್ ಎಕ್ಸ್‌ಚೇಂಚ್ ಚರ್ಚೆಗಳು ಬಹುತೇಕ ಸುಗಮ ಹಾಗೂ ಶಾಂತಿಯುತವಾಗಿ ಇರುತ್ತವೆ. ಆದರೆ ಕೆಲವೊಮ್ಮೆ ಟಿಬೆಟ್, ದಲಾಯಿ ಲಾಮ, ಪಾಕ್-ಚೈನಾ ನಿಗೂಢ ವಹಿವಾಟು ಮುಂತಾದ ವಿಷಯಗಳು ಬಂದಾಗ ಚರ್ಚೆ ವಿಕಾರ ಸ್ವರೂಪಕ್ಕೆ ಹೋಗುವುದುಂಟು. ಹೀಗೆ ನಮ್ಮ ಚರ್ಚೆಯಲ್ಲಿ ಕಿರಿಕ್ಕು ಬಂದಾಗ ಮಾತ್ರ ನನ್ನ ಇನ್ನೊಬ್ಬ ಅಮೆರಿಕನ್ ರೂಮ್ಮೇಟ್ `ಮಾರ್ವಿನ್'ನ ಅಗತ್ಯ ಬೀಳುತ್ತದೆ. ಮಾರ್ವಿನ್ ವಯಸ್ಸು ೨೨, ಲಾ ಓದುತ್ತಿರುವ ವಿದ್ಯಾರ್ಥಿ. ಇವನು ಕಿರಿಕ್ಕು ಬಗೆಹರಿಸುವುದಕ್ಕೂ ಮುಂಚೆ, ಅದರಿಂದ ಅಮೆರಿಕಾಕ್ಕೆ ಆಗುವ ಲಾಭ-ನಷ್ಟದ ಬಗ್ಗೆ ನೂರು ಬಾರಿ ಯೋಚಿಸುತ್ತಾನೆ. ಅದು ಅವನ ರಕ್ತದೋಷವೆಂಬುದು ನಮ್ಮ (ಹಿಂದಿ-ಚೀನೀ ಭಾಯಿ ಭಾಯಿ) ಅಂತಿಮ ತೀರ್ಮಾನ.

ನಾನು chop sticks ಉಪಯೋಗಿಸುವುದನ್ನು ಮೊದಲು ಕಲಿತದ್ದು ಮಿಂಗ್ ಚಾ ಸಹಾಯದಿಂದ. ಮೊದಲು ಕಷ್ಟವೆನಿಸಿದರೊ ಈಗ ಅನ್ನದ ಒಂದೊಂದು ಅಗಳನ್ನು ಕೊಡಾ ಪ್ಲೇಟ್‌ನಲ್ಲಿ ಬಿಡದಂತೆ ಭಕ್ಷಿಸಬಲ್ಲೆ. eಟm oಠಿಜ್ಚಿho ಉಪಯೋಗಿಸಿ ಮಾಡುವ ಊಟ ಕೊಡುವ ತೃಪ್ತಿ ಅಪರೂಪದ್ದು. ಹಾಗೆಯೇ ಮೀಂಗ್ ಚಾ ಗೆ ಜೇಸುದಾಸ್ ಅಂದ್ರೆ ತುಂಬಾ ಇಷ್ಟ ಅನ್ನುವುದೂ ಅಪರೂಪದ ಸಂಗತಿ. ಅವನು ಜೇಸುದಾಸ್‌ನ `ಗೋರಿ ತೇರಾ ಗಾಂವ್ ಬಡಾ ಪ್ಯಾರಾ...' ಹಾಡನ್ನು ಚೈನಿಸ್ ಲಿಪಿಯಲ್ಲಿ ಬರೆದುಕೊಂಡು ಗುನುಗುತಿರುತ್ತಾನೆ. ಮಾರ್ವಿನ್‌ಗೆ ಇಡ್ಲಿ ಎಂದರೆ ಪಂಚಪ್ರಾಣ. ಈಗ ಅವನು ಸ್ವತಂತ್ರವಾಗಿ ಇಡ್ಲಿಯನ್ನು ತಯಾರಿಸಬಲ್ಲ. ಇಂಡಿಯನ್ ಸ್ಟೋರ್‌ನಿಂದ ಇಡ್ಲಿ ಸ್ಟ್ಯಾಂಡ್ ಕೂಡಾ ಕೊಂಡು ತಂದಿದ್ದಾನೆ ! ಆದರೆ ಅವನು ಚಟ್ನಿ ಅಥವಾ ಸಾಂಬಾರ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆತ ಇಡ್ಲಿಯನ್ನು ತಿನ್ನುವ ರೀತಿಯೇ ವಿಚಿತ್ರ. ಎರಡು ಇಡ್ಲಿಗಳ ನಡುವೆ ಚಿಕನ್ ಇಟ್ಟುಕೊಂಡು ಸ್ಯಾಂಡ್‌ವಿಚ್ ರೀತಿಯಲ್ಲಿ ಅವನು ತಿನ್ನುತ್ತಾನೆ. chop sticks ಉಪಯೋಗಿಸುವುದನ್ನು ಮೊದಲು ಕಲಿತದ್ದು ಮಿಂಗ್ ಚಾ ಸಹಾಯದಿಂದ. ಮೊದಲು ಕಷ್ಟವೆನಿಸಿದರೊ ಈಗ ಅನ್ನದ ಒಂದೊಂದು ಅಗಳನ್ನು ಕೊಡಾ ಪ್ಲೇಟ್‌ನಲ್ಲಿ ಬಿಡದಂತೆ ಭಕ್ಷಿಸಬಲ್ಲೆ. chop sticks ಉಪಯೋಗಿಸಿ ಮಾಡುವ ಊಟ ಕೊಡುವ ತೃಪ್ತಿ ಅಪರೂಪದ್ದು. ಹಾಗೆಯೇ ಮೀಂಗ್ ಚಾ ಗೆ ಜೇಸುದಾಸ್ ಅಂದ್ರೆ ತುಂಬಾ ಇಷ್ಟ ಅನ್ನುವುದೂ ಅಪರೂಪದ ಸಂಗತಿ. ಅವನು ಜೇಸುದಾಸ್‌ನ `ಗೋರಿ ತೇರಾ ಗಾಂವ್ ಬಡಾ ಪ್ಯಾರಾ...' ಹಾಡನ್ನು ಚೈನಿಸ್ ಲಿಪಿಯಲ್ಲಿ ಬರೆದುಕೊಂಡು ಗುನುಗುತಿರುತ್ತಾನೆ. ಮಾರ್ವಿನ್‌ಗೆ ಇಡ್ಲಿ ಎಂದರೆ ಪಂಚಪ್ರಾಣ. ಈಗ ಅವನು ಸ್ವತಂತ್ರವಾಗಿ ಇಡ್ಲಿಯನ್ನು ತಯಾರಿಸಬಲ್ಲ. ಇಂಡಿಯನ್ ಸ್ಟೋರ್‌ನಿಂದ ಇಡ್ಲಿ ಸ್ಟ್ಯಾಂಡ್ ಕೂಡಾ ಕೊಂಡು ತಂದಿದ್ದಾನೆ ! ಆದರೆ ಅವನು ಚಟ್ನಿ ಅಥವಾ ಸಾಂಬಾರ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆತ ಇಡ್ಲಿಯನ್ನು ತಿನ್ನುವ ರೀತಿಯೇ ವಿಚಿತ್ರ. ಎರಡು ಇಡ್ಲಿಗಳ ನಡುವೆ ಚಿಕನ್ ಇಟ್ಟುಕೊಂಡು ಸ್ಯಾಂಡ್‌ವಿಚ್ ರೀತಿಯಲ್ಲಿ ಅವನು ತಿನ್ನುತ್ತಾನೆ.
ನನ್ನ ಈ ಸಲದ ಭಾರತ ಭೇಟಿ ಕುರಿತು ನನ್ನ ರೂಮ್ಮೇಟ್‌ಗಳಿಗೆ ಎಲ್ಲಿಲ್ಲದ ಕುತೂಹಲ। ಏಕೆಂದರೆ ಈ ಸಲ ಹುಡುಗಿ ನೋಡಿ, ಸಾಧ್ಯವಾದರೆ ಮದುವೆ ಮಾಡಿಕೊಂಡು ಬರುವೆ ಎಂದು ತಿಳಿಸಿದ್ದೇನೆ। ಇಬ್ಬರಿಗೊ ಇದು ಅರ್ಥವಾಗದ ವಿಚಾರ. ಅವರ ಪ್ರಕಾರ ಒಂದೇ ತಿಂಗಳಲ್ಲಿ ಹುಡುಗಿಯನ್ನು ಒಂದು ಸಾರಿ ನೋಡಿ- ಭೇಟಿಮಾಡಿ ಮದುವೆಯಾಗುವುದು ಮೂರ್ಖತನ. ಆದರೆ ಭಾರತೀಯ ವಿವಾಹಗಳಲ್ಲಿ ಕಂಡು ಬರುವ ಹೆಚ್ಚಿನ ಸ್ಥಿರತೆ ಗಮನಿಸಿದಾಗ ಇವರಿಗೆ ಪರಮಾಶ್ಚರ್ಯ. ನಾನು ಇವರಿಗೆ ಆಗಾಗ ಹೇಳುತ್ತಿರುತ್ತೇನೆ (ಎಲ್ಲೋ ಓದಿದ್ದ ನೆನಪು), `ಒಬ್ಬ ಗಂಡಸು ಸುಖವಾಗಿರಲು ನಾಲ್ಕು ಅಂಶ ಮುಖ್ಯ. ಒಂದು- ಇರಲು ಬೆಚ್ಚನೆಯ ಗೂಡು, ಅರ್ಥಾತ್ ಮನೆ. ಎರಡು- ವೆಚ್ಚಕ್ಕೆ ಹೊನ್ನು, ಅರ್ಥಾತ್ ಕೈ ತುಂಬಾ ಸಂಬಳ. ಮೂರು- ಬಾಯಲ್ಲಿ ನೀರೂರಿಸುವ ರುಚಿಕಟ್ಟಾದ ಊಟ. ಕೊನೆಯದಾಗಿ- ಮನೆ-ಮನ ತುಂಬುವಂಥಾ `ಮಡದಿ'. ಮನೆಗಳ ವಿಷಯಕ್ಕೆ ಬಂದಾಗ ಅತ್ಯುತ್ತಮವಾದ ಮನೆಗಳು ಎಂದರೆ ಬ್ರೀಟಿಷರ ಮನೆಗಳು। ಸಂಬಳದ ವಿಷಯಕ್ಕೆ ಬಂದಾಗ ಹೆಚ್ಚಿನವರು ಬಯಸುವುದು ಅಮೆರಿಕಾದ ಡಾಲರ್ ಸಂಬಳ. ಇನ್ನು ಊಟದ ವಿಚಾರಕ್ಕೆ ಬಂದರೆ, ವಿಶ್ವದ ಎಲ್ಲ ಭಾಗಗಳಲ್ಲಿ ಪ್ರಸಿದ್ಧ ಬೋಜನವೆಂದರೆ ಚೈನೀಸ್ ಫುಡ್. ಕೊನೆಯ ಹಾಗು ಮುಖ್ಯವಾದದ್ದು ಹೆಂಡತಿ. ನಿಮ್ಮೊಂದಿಗೆ ಇದ್ದರೆ ಭಾರತೀಯ ನಾರಿ ಅದೇ ಸ್ವರ್ಗಕ್ಕೆ ದಾರಿ. ಎಲ್ಲರಿಗೂ ಇವೆಲ್ಲಾ ಒಟ್ಟೊಟ್ಟಿಗೆ ಸಿಗುವುದು ಕಷ್ಟ. ಆದರೆ ಶ್ರಮಪಟ್ಟರೆ ಕೈತುಂಬಾ ಸಂಬಳ ಪಡೆಯಬಹುದು. ಇದಾದ ನಂತರ ಚೆಂದದ ಮನೆ ಕಟ್ಟುವುದೂ ಕಷ್ಟವೇನಲ್ಲ ಬಿಡಿ. ನಳಕುಲದ ನಮ್ಮಂಥವರಿಗೆ ಚೈನೀಸ್ ಫುಡ್ ತಯಾರಿಸುವುದೂ ತ್ರಾಸಿನ ಮಾತೇನಲ್ಲ. ಆದರೆ ಭಾರತೀಯ ಹೆಂಡತಿ ಸಿಗಬೇಕೆಂದರೆ ಅದೃಷ್ಟ ಒದ್ದುಕೊಂಡು ಬರಬೇಕು ! ಇಷ್ಟೆಲ್ಲವನ್ನೂ ಕಷ್ಟ ಪಟ್ಟು ವಿವರಿಸಿದಾಗ ಮಾತ್ರ ಅಮೆರಿಕನ್ ಲಾಯರ್ ಹಾಗೂ ಚೈನೀಸ್ ಚಿಂಗು (ದೇಶೀಯರು ಚೈನೀಸ್‌ಗಳಿಗೆ ಇಟ್ಟಿರುವ ಕೋಡ್‌ವರ್ಡ್) ಗಳನ್ನು ಸುಮ್ಮನೆ ಕೂರಿಸಲು ಸಾಧ್ಯ। ನನ್ನ ಈ ವಾದ ಸರಿಯೇ ? ನಿಜವಾಗಿಯೂ ಭಾರತೀಯ ಹೆಂಡತಿ ಪಡೆದವನು ಅದೃಷ್ಟವಂತನೇ? ಯಾವುದಕ್ಕೂ ನಿಮ್ಮ ಅನಿಸಿಕೆಯನ್ನು ಗುಟ್ಟಾಗಿ ನನಗೆ ತಿಳಿಸಿ. ನೆನಪಿರಲಿ, ಈ ಪ್ರಶ್ನೆಗಳು ಗಂಡಸರಿಗೆ ಮಾತ್ರ!