ಕನೆಕ್ಟೀಕಟ್‍ನಲ್ಲಿ ಹರಡಿದ ಕನ್ನಡದ ಕಂಪು


ಕನ್ನಡಿಗರ ನೆಚ್ಚಿನ ಹಬ್ಬ ದೀಪಾವಳಿಯೊಂದಿಗೆ ನಮ್ಮ ನಾಡಿನ ಕನ್ನಡದ ಹಬ್ಬ ಕನ್ನಡ ರಾಜೋತ್ಸವವನ್ನು ಒಟ್ಟೊಟಿಗೆ ಮಾಡಿದಾಗ, ಕಣ್ಮನಗಳಿಗೆ ಸಿಗುವ ಅದ್ದೂರಿ ಸಂಭ್ರಮ ನೋಡಬೇಕಾಗಿದ್ದರೆ ನೀವು ಅಲ್ಲಿ ಇರಬೇಕಿತ್ತು. ಹೊಯ್ಸಳ ಕನ್ನಡ ಕೂಟ ಕನೆಕ್ಟೀಕಟ್‍ ವತಿಯಿಂದ 2009ನೇ ನವೆಂಬರ್ 7ರಂದು ಸೌತ್-ವಿಂಡಸರ್‌ನ ಭವ್ಯವಾದ ರಂಗಮಂದಿರದಲ್ಲಿ ಈ ಹಬ್ಬಗಳ ಪ್ರಯುಕ್ತ ಆಯೋಜಿಸಲಾದ ಕನ್ನಡದ ಸಂಸ್ಕೃತಿ, ಇತಿಹಾಸ, ಸೊಗು-ಸೊಡಗು ಮತ್ತು ಇಂದಿನ ವಿದ್ಯಮಾನಗಳನ್ನು ಎತ್ತಿ ಸಾರುವ ರಂಗು-ರಂಗಾದ ವಿವಿಧ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.


ದೇವರ ಪ್ರಾಥ೯ನೆಯೊಂದಿಗೆ ಕಾಯ೯ಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಕನೆಕ್ಟಿಕಟ್‍ನಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ಸತತ ಪ್ರಯತ್ನಮಾಡಿ ನಿರಂತರವಾಗಿ ಗೆಲ್ಲುತ್ತಿರುವ ಕೂಟದ ಅಧ್ಯಕ್ಷ ಶ್ರೀನಿವಾಸ್ ಕೊಮಲಾ೯ ಎಲ್ಲರಿಗೂ ಹಬ್ಬಗಳ ಶುಭಾಶಯಗಳನ್ನು ಕೋರಿ ಸ್ವಾಗತಿಸಿದರು. ಮೊಟ್ಟ ಮೊದಲ ಕಾಯ೯ಕ್ರಮ ಚಂದ್ರಶೇಖರ್ ಭಟ್ ನಡಿಸಿಕೊಟ್ಟ ಮಕ್ಕಳ ವೇಷ ಭೂಷಣ ಕಾಯ೯ಕ್ರಮ. ಇದರಲ್ಲಿ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕನ್ನಡನಾಡಿನ ಹಲವು ಮಹಾನ್ ವ್ಯಕ್ತಿಗಳು ಮತ್ತು ಕನಾ೯ಟಕದ ಜೀವನ ಶೈಲಿಗಳನ್ನು ನೆನೆಪಿಗೆ ತಂದರು. ಸಾತ್ವಿಕ್ ಹುಳೀಕೆರೆ ಹಾಕಿದ್ದ ವಿಜಯನಗರದ ಕೃಷ್ಣದೇವರಾಯ, ಅನಿಕೇತ್ ಚೆಲುವ ಶಿಶುನಾಳ ಶರೀಫ್‍ನಾಗಿ, ಮೀನುಗಾರ ಹುಡುಗ, ರಾಮಾಯಣದ ಪಾತ್ರಗಳು ಇನ್ನೂ ಹತ್ತು ಹಲವಾರು ವಿವಧ ಪೊಷಾಕುಗಳನ್ನು ಮಕ್ಕಳಿಗೆ ಹಾಕಿಸಿ ಪೊಷಕರು ಕಿರುನಗೆ ಬೀರಿದರು.

ಇದಾದ ನಂತರ ಭಾರತೀಯ ವಿವಧ ಹಬ್ಬಗಳನ್ನು ತೋರಿಸುವ ಸುಮಾರು 50 ಕ್ಕೂ ಹೆಚ್ಚು ಮಕ್ಕಳನ್ನೊಳಗೊಂಡ ಸಂಗೀತ ನೃತ್ಯ "ಹಬ್ಬಗಳ ವೈಭವ" ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಬಡಿಸಿತು. ಇಷ್ಟೊಂದು ಮಕ್ಕಳನ್ನು ಒಟ್ಟಿಗೆ ಕಲೆ ಹಾಕಿ, ನೃತ್ಯ ಸಂಯೋಜಿಸಿದ ಪ್ರೀಯಾ ಹಾರ್ಯಾಡಿ ಯವರ ತಾಳ್ಮೆ ಹಾಗೂ ಪ್ರತಿಭೆ ಎರಡಕ್ಕೂ ಹ್ಯಾಟ್ಸ್-ಆಫ್!. ಇದಾದ ಮೇಲೆ ಭ್ರಮರಿ ಶಿವಪ್ರಕಾಶರವರು ತಮ್ಮ 2 ವಷ೯ದ ಮಗು ಸಾರಂಗ್ ಶಿವಪ್ರಕಾಶ ಜೊತೆ ಮಾಡಿದ ಭರತನಾಟ್ಯ ಸಂಯೋಜನೆ "ಜಗದೋದಹರಣ ಕೃಷ್ಣ" ನೋಡುಗರನ್ನು ಕಿನ್ನರ ಲೋಕಕ್ಕೆ ಕರೆದೊಯ್ಯಿತು. ಹೊಯ್ಸಳ ಸಾಮ್ರಜ್ಯದ ಮಹಾನ್ ಕವಿಗಳಾದ ಕಂಠಿ ಮತ್ತು ನಾಗಚಂದ್ರರ‍ನ್ನು ಒಳಗೊಂಡ ಹಳೆಗನ್ನಡದ ಸಂವಾದಗಳ ಕಿರುನಾಟಕದಲ್ಲಿ ಕೆಲಕಾಲ ತೊದಲು ನುಡಿಗಳ ಮರೆತ ಮಕ್ಕಳ ನಾಲಿಗೆ ಮೇಲೆ ಹಳೆಗನ್ನಡ ಸಲಿಸಾಗಿ ತಕ-ದಿಮ್ಮಿತಾ ಅಂತ ನಾಟ್ಯವಾಡಿದಂತಿತ್ತು.

ಇದೆಲ್ಲವನ್ನು ಅನುಭವಿಸಿ ಪ್ರೇಕ್ಷಕರು ಸುಧಾರಿಸಿಕೊಳ್ಳವಷ್ಟರಲೇ, ದಿಡೀರ್ ಅಂತ ಶುರುವಾಗಿದ್ದು ಜೇನಿನಹೊಳೆ...ಹಾಲಿನಮಳೆ...". ಕಾಯ೯ಕ್ರಮದ ಹೆಸರು "ವೈವಿಧ್ಯಮಯ ಕನಾ೯ಟಕ" ಅಣ್ಣಾವ್ರು ಹಾಡಿದ ಆ ಸೊಲೊ ಹಾಡು ಇಲ್ಲಿ ಗ್ರೂಫ್ ಸಾಂಗ್ ಆಗಿತ್ತು, ಹಾಗೆ ಕನ್ನಡನಾಡಿನ ವಿವಧ ಪ್ರಾದೇಶಿಕ ಉಡುಪುಗಳನ್ನ ತೊಟ್ಟ ಒಂದೊಂದೆ ಜೋಡಿ ದೀಪಗಳನ್ನು ಹಿಡಿದು ಜೈ ಕನಾ೯ಟಕ ಮಾತೆಯನ್ನು ಸುತ್ತುವರಿದು ನಿಂತವು, ಕಾಯ೯ಕ್ರಮಕ್ಕಾಗಿ ವಿಶ್ವನಾಥ್-ರಷ್ಮಿ ದಂಪತಿಗಳು ತಯಾರಿಸಿದ್ದ ದೀಪಗಳನ್ನೊಳಗೊಂಡ ಕನಾ೯ಟಕ ನಕ್ಷೆಯ ಕಟೌಟ್ ಎಲ್ಲರ ಗಮನ ಸೆಳೆಯಿತು.

ಅನಘ ನಾಗರಜ್ ರವರ "ಕೃಷ್ಣ-ಕೊರ‍ವಂಜಿ" ಭರತನಾಟ್ಯ ಸಂಯೋಜನೆ ಅದ್ಬುತ. ಆದರೆ, ಈ ನಾಟ್ಯದಲ್ಲಿ ಅವರು ಉಪಯೋಗಿಸಿದ ಅನ್ಯ ಭಾಷೆಯ ಹಾಡುಗಳು ಕೆಲವು ಕನ್ನಡಗರಿಗೆ ಕಿರಿ-ಕಿರಿ ಅನಿಸಿದವು. ಕೀತಿ೯ ಪೈ ಅವರು ಸಂಯೋಜಿಸಿದ್ದ "ಘಲ್ಲು-ಘಲೆನುತ್ತಾ", ಗಿರೀಶ್ ನಿಲಕಂಟ ಅವರ "ತರಲೆಗಳ ಸಂಗಮ" ಮಿಮಿಕ್ರಿ ಎಲ್ಲರ ಗಮನ ಸೆಳೆದವು. ಅನಿತಾ ಕೃಷ್ಣಮೂತಿ೯ ಸಂಯೋಜನೆಯಲ್ಲಿ ಮಹಿಳಾ ಸಮೂಹ ನೃತ್ಯ "ವಂದೇ ಮಾತರ‍ಂ" ಮಾತ್ರ ಬಿಗ್-ಹಿಟ್! ಇಲ್ಲಿ ಉಪಯೋಗಿಸಿದ ಶ್ವೇತವಣ೯ದ ಸೊಗಸಾದ ಉಡುಗೆಗಳು ಸೂಪರ್-ಹಿಟ್!

ಕೊನೆಯದಾಗಿ ಯಶವಂತ್ ಗಡ್ಡಿ ಬರೆದು ನಿರ್ದೇಶಿಸಿದ ನಗೆ ನಾಟಕ "ನಮ್ಮಳ್ಳೀ ನಾಟಕ" ಪ್ರೇಕ್ಷಕರ ಮನಗೆದ್ದಿತು, ಪ್ರದೀಪ್ ಡೊಲ್ಲಿನ್, ಗಿರೀಶ ಕಬ್ಬಿನದ, ಸುನಿತಾ, ಸ್ವಣ೯ ಮುಂತಾದವರು ನಟನೆಯಂತೂ ಬಲು ಬೊಂಬಾಟ್! ಕಾಯ೯ಕ್ರಮಗಳು ಮುಗಿಯುವ ಹೊತ್ತಿಗೆ ಎಲ್ಲರ ಹೊಟ್ಟೆಗಳು ತಾಳ ಹಾಕಲಾರಂಬಿಸಿದವು, ಕನ್ನಡ ಕೂಟದ ಮೃಷ್ಟಾನ ಭೋಜನ ಮುಗಿಯುವ ಹೊತ್ತಿಗೆ ಬರೊಬ್ಬರಿ ರಾತ್ರಿ ಹತ್ತು ಗಂಟೆ. ಸುಮಾರು ಐದು ತಾಸಿನ ಕನ್ನಡ ರಾಜೋತ್ಸವ ಹಾಗೂ ದೀಪಾವಳಿಯ ಮನೋರ‍ಂಜನೆ ಕಾಯ೯ಕ್ರಮಗಳನ್ನು ಮನಸ್ಸೊ-ಇಚ್ಚೆ ಸವಿದ ಮಕ್ಕಳು ಮತ್ತು ಪೋಷಕರು ಹೊಯ್ಸಳ ಕನ್ನಡ ಕೂಟಕ್ಕೆ ಧನ್ಯವಾದ ಹೇಳುತ್ತಾ ತಮ್ಮ-ತಮ್ಮ ಮನೆ ದಾರಿ ಹಿಡಿದರು. ಜೈ ಕನಾ೯ಟಕ.

ವಾಲ್‍ಸ್ಟ್ರೀಟ್‍ನಲ್ಲಿ ರಕ್ತಪಾತ!

ಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ...


ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು ಮುಂದೇನು? ಎಂದು ಯೋಚಿಸುತ್ತಾ ಕುಂತಿರುವ ಹಾಗೆ ನನಗೆ ಅನಿಸುತ್ತಿದೆ. ಈ ದೇಶದ ಇತಿಹಾಸದ ಪುಟಗಳ ಮೇಲೆ ದಪ್ಪವಾಗಿ ಕಪ್ಪು ಅಕ್ಷರಗಳಲ್ಲಿ 2008ನೇ ವಷ೯ದ ಕಥೆಗಳನ್ನು ಬರೆಯಬೇಕಾಗುರುವುದು ಬಹಳಷ್ಟಿದೆ. ವಾಲ್ ಸ್ಟ್ರೀಟ್ ನಲ್ಲಿ ಈ ಇಡೀ ವಷ೯ ನಡೆದ ಅಂಕಲ್ ಸ್ಯಾಮ್‍ನ ಮುದ್ದಿನ ಡಾಲರಿನ ರಕ್ತಪಾತ ಕಂಡು ನಿಬ್ಬೆರಗಾದ ಜಾಗತಿಕ ಹೂಡಿಕೆದಾರರು ನಾಗಾಲೋಟದಲ್ಲಿ ಪಾತಾಳ ಸೇರಿಕೊಂಡಿದ್ದಾರೆ.ಸಿಕ್ಕಾಪಟ್ಟೆ ಬೋನಸ್ ಗಳು, ಆಕಷ೯ಕವಾದ ಶೇರು ಹೂಡಿಕೆದಾರರ ಲಾಭಾಂಶ, ಒಂದರ ಮೇಲೆ ಮತ್ತೊಂದು ಹಗರಣಗಳು, ಡಾಟ್ ಕಾಮ್‍ನ ಪತನ... ಈ ಯಾವುದೇ ಅಂಶಗಳನ್ನು ಲೆಕ್ಕಿಸದೆ ವಾಲ್ ಸ್ಟ್ರೀಟ್‍ನ ಬಂಡವಾಳ ಹೂಡಿಕೆ ಬ್ಯಾಂಕುಗಳು ಹಾಗು ರೆಗುಲೇಶನ್ ರಹಿತ ಹೇಡ್ಝ್ ಫಂಡುಗಳು ಹತೋಟಿಗೂ ಮೀರಿ 2006ನೇ ವಷ೯ದ ಅಂತ್ಯದ ವೇಳೆಗಾಗಲೇ ತಲೆ ಎತ್ತಿ ನಿಂತುಕೊಂಡಿದ್ದವು. ಹೀಗೆ ಜಾಲಿ ರೈಡ್‍ನಲ್ಲಿ ತೇಲಾಡುತ್ತಿದ್ದ ವಾಲ್ ಸ್ಟ್ರೀಟ್‍ಗೆ ಮೊದಲ ಸಿಡಿಲು ಬಡೆದದ್ದು 31ನೇ ಅಕ್ಟೋಬರ್ 2007ರಂದು.

ನಾನು ಈಗ ಕೆಲಸಮಾಡುವ ಕಂಪನಿಯಲ್ಲಿ ಹಿರಿಯ ವಿಶ್ಲೇಷಕಿಯಾಗಿ ಕೆಲಸಮಾಡುತ್ತಿರುವ ಮೇರಿಡೆತ್ ವಿಟ್ನಿ ಎಂಬ ಸರಳ, ಸಿದಾಸಾದಾ ಮಹಿಳೆ ಅಂದು ಹೇಳಿದ್ದು ಏನೆಂದರೆ; 'ಸಿಟಿ ಗ್ರೂಪ್ ಕಂಪನಿ ತನ್ನ ಬಂಡವಾಳ ನಿವ೯ಹಣೆಯಲ್ಲಿ ತುಂಬಾ ತಪ್ಪುಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಶೇರುದಾರರು ಇದರತ್ತ ಗಮನಹರಿಸಬೇಕು'. ಅವಳು ಅಷ್ಟು ಹೇಳಿದ್ದೇ ತಡ ಅಂದಿನ ದಿನದ ಟ್ರೇಡಿಂಗ್ ಮುಗಿಯುವ ಹೊತ್ತಿಗೆ ಸುಮಾರು 350 ಬಿಲಿಯನ್ ಡಾಲರ್‌ಗಳಷ್ಟು ಮೊತ್ತದ ಬ್ಯಾಂಕ್‍ಗಳ ಶೇರುಗಳು ನೆಲಕ್ಕುರುಳಿದವು.ಇದಾದ ನಾಲ್ಕುದಿನಗಳ ಅಂತರದಲ್ಲಿ ಸಿ.ಟಿ. ಗ್ರೂಪಿನ ಸಿ.ಇ.ಓ ರಾಜೀನಾಮೆ ನೀಡಿದ್ದಲ್ಲದೆ, ಕಂಪನಿಯ ಲಾಭಾಂಶದಲ್ಲಿ ಕಡಿತ ಘೋಷಿಸಲಾಯಿತು. "ಸಬ್-ಪ್ರೈಮ್ ಮಾರ್ಟಗೇಜ್" ಎಂಬ ಖೆಡ್ಡಾದಲ್ಲಿ ಸಿಟಿ ಬ್ಯಾಂಕ್ ಎಂಬ ಆನೆ ಮುಗ್ಗರಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸುಮಾರು 20,000 ಸಿ.ಟಿ ಗ್ರೂಪ್ ಉದ್ಯೋಗಿಗಳನ್ನು ಮನೆಗೆ ಕಳಿಸುವುದಾಗಿ ಕಂಪನಿ ಪ್ರಕಟಿಸಿತು. ಅಲ್ಲಿಂದ ಶುರುವಾಯಿತು ನೋಡಿ ಆ ಖೆಡ್ಡಾದಲ್ಲಿ ಬಿದ್ದ ದೊಡ್ದ ದೊಡ್ಡ ಆನೆಗಳನ್ನು ಹೊರತೆಗೆಯುವ ಕೆಲಸ.



















9 ಮಾಚ್೯ 2008ರಲ್ಲಿ ಸುಮಾರು 80 ವಷ೯ಗಳಿಗೂ ಹಳೆಯದಾದ ಪ್ರತಿಷ್ಠಿತ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಬ್ಯಾಂಕುಗಳಲ್ಲಿ ಒಂದಾದ ಬಿಯರ್-ಸ್ಟಯರ್ನ್ಸ್ ಕೂಡಾ ಇದೇ ಖೆಡ್ಡಾದಲ್ಲಿ ಬಿದ್ದು ಕುಸಿಯುವ ಹಂತದಲ್ಲಿದಾಗ ಪ್ರತಿ ಶೇರಿಗೆ 10 ಡಾಲರಿನಂತೆ ಜೆ.ಪಿ.ಮಾರ್ಗನ್ ಚೇಜ್ ಬ್ಯಾಂಕಿಗೆ ಅಗ್ಗ ದರದಲ್ಲಿ ಬಿಕರಿಯಾಯಿತು. ಇದೇ ರೀತಿ 150 ವಷ೯ಗಳಿಗೂ ಹಳೆಯದಾದ ಲಿಮನ್ ಬ್ರದರ್ಸ್ ಬ್ಯಾಂಕು ಕೂಡಾ ರಾತ್ರೋ ರಾತ್ರಿ ಹೇಳಹೆಸರಿಲ್ಲದೆ ಮಂಗಮಾಯವಾಯಿತು. "ಸಬ್-ಪ್ರೈಮ್ ಮಾರ್ಟಗೇಜ್" ಎಂಬ ಖೆಡ್ಡಾದಲ್ಲಿ ಬಿದ್ದವರ ಪಟ್ಟಿ ಹನುಮಂತನ ಬಾಲದ ರೀತಿ ಬೆಳೆಯುತ್ತಲೇ ಹೋಯಿತು. ಇಂಡಿಮ್ಯಾಕ್, ಫ್ರೆಡಿ ಮ್ಯಾಕ್, ಪ್ಯ್ಹಾನಿ ಮೇ, ಎ. ಐ.ಜಿ, ಮೇರಿಲೀಂಚ್, ಗೊಲ್ಡ್ಮನ್ ಸಾಕ್ಸ್ ಇನ್ನೂ ಅನೇಕ ವಾಲ್ ಸ್ಟ್ರೀಟ್‍ನ ಬಿಳಿಯಾನೆಗಳು ಅಂಗಾತ ಮಲಗಿಕೊಂಡವು. ಇದರೊಂದಿಗೆ ಬಿಲಿಯನ್ ಗಟ್ಟಲೆ ಶೇರುದಾರರು ಡಾಲರ್‌ಗಳನ್ನು ಹಾಗೂ ಲಕ್ಷಾಂತರ ಜನಗಳು ಕೆಲಸಗಳನ್ನು ಕಳೆದುಕೊಂಡರು.


ಇದಕ್ಕೆಲ್ಲಾ ಮೂಲ ಕಾರಣಗಳೇನು? ಈ "ಸಬ್-ಪ್ರೈಮ್ ಮಾರ್ಟಗೇಜ್" ಎಂದರೇನು? ಈ ಪರಿಸ್ಥಿತಿ ಹೇಗೆ ಬಂದಿತು? ವಿವರಿಸುವುದು ಸ್ವಲ್ಪ ಕಷ್ಟದ ಕೆಲಸ. ಖ್ಯಾತ ರೇಡಿಯೊ ಟಾಕ್ ಹೋಸ್ಟ್ "ಗ್ಲೇನ್ ಬ್ಯಾಕ್" ವಿವರಿಸುವ ರೀತಿ ಒಂದು ಸರಳ ಉದಾಹರಣೆಯನ್ನು ಮುಂದಿಟ್ಟುಕೊಂಡು ನಿಮಗೆ ವರದಿ ಒಪ್ಪಿಸಲು ಮುಂದಾಗುತ್ತೇನೆ.



***ಸುಮ್ಮನೆ ಹಾಗೆ ಊಹಿಸಿಕೊಳ್ಳಿ. ಇಸವಿ 2005ರ ಅಂಚಿನಲ್ಲಿ ಕನ್ನಡನಾಡಿನ ಕೆಲವು ಕಂದಮ್ಮಗಳಿಗೆ ಚನ್ನಪಟ್ಟಣದ ಮರದಲ್ಲಿ ಮಾಡಿದ ಚೆಲುವಿನ ಗೊಂಬೆ ಮೇಲೆ ತುಂಬಾ ಪ್ರೀತಿ ಹುಟ್ಟಿಕೊಂಡು ಬಿಟ್ಟಿತು. ಈ ಮಕ್ಕಳ ಪೋಷಕರು ಮುಗಿಬಿದ್ದು ಮರದ ಗೊಂಬೆಗಳನ್ನು ಕೊಂಡುಕೊಳ್ಳತೊಡಗಿದರು. ನೋಡು ನೋಡುತ್ತಿದಂತೆ 50 ರೂಪಾಯಿಯ ಈ ಗೊಂಬೆ 100 ರೂಪಾಯಿಗೆ ಏರಿತು. ಇದನ್ನು ಗಮನಿಸಿದ ಗೊಂಬೆಮಾರುವ ಅಂಗಡಿಯವರು ದುಡ್ಡು ಮಾಡಲು ಇದು ಒಳ್ಳೆಯ ಸಮಯ ಅಂದುಕೊಂಡರು. ಕನ್ನಡನಾಡಿನ ಮೂಲೆ ಮೂಲೆಗೂ ನಾವು ಗೊಂಬೆ ಮಾರಿದರೆ ಲಕ್ಷಾಧಿಪತಿಗಳಾಗಬಹುದು ಎಂದು ಊಹಿಸಿಕೊಂಡರು. ಆದರೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಗೊಂಬೆಗಳನ್ನು ಕೊಳ್ಳಲು ಅವರಲ್ಲಿ ಹಣವಿರಲ್ಲಿಲ್ಲ. ಆಗ ಅವರು ಬ್ಯಾಂಕಿನವರ ಹತ್ತಿರ ಸಾಲಕ್ಕಾಗಿ ಹೋದರು. ಬ್ಯಾಂಕ್‍ನವರು ಕೂಡಾ ಇದು ಒಳ್ಳೆಯ ಉಪಾಯ ಅಂದುಕೊಂಡು ಸಾಲವನ್ನು ಕೊಟ್ಟರು. ಸಾಲಮಾಡಿ ಗೊಂಬೆ ಅಂಗಡಿಯವರು ತಮ್ಮ ಗೋಡೌನ್‍ಗಳನ್ನು ಭತಿ೯ ಮಾಡಿಕೊಂಡು ಗೊಂಬೆ ಮಾರಾಟಕ್ಕೆ ನಿಂತರು.


ಈ ಮರದ ಗೊಂಬೆ ಕನಾ೯ಟಕದ ಎಲ್ಲಾ ಪಟ್ಟಣಗಳಿಂದ ಹಿಡಿದು ಹಳ್ಳಿಗಳವರೆಗೂ ಮನೆಮಾತಾಯಿತು. ಹಾಗಾಗಿ, ಗೊಂಬೆ ಬೆಲೆ 500 ರೂಪಾಯಿಗೆ ಏರಿತು. ಗೊಂಬೆ ಮಾರುವ ಅಂಗಡಿಯವರು ಮಾರಾಟದ ಭರಾಟೆಯನ್ನು ನೋಡಿ ಕುಣಿದಾಡಿದರು. ಸ್ವಲ್ಪ ದಿನದಲ್ಲೇ ಸುಮಾರು ದುಡ್ಡು ಮಾಡಿಕೊಂಡರು. ಆದರೆ ಗೊಂಬೆ ಬೆಲೆ ಜಾಸ್ತಿ ಆಗಿದ್ದರಿಂದ ಶ್ರೀಮಂತರು ಹಾಗು ಕೆಲವು ಮಧ್ಯಮ ವಗ೯ದ ಫೊಷಕರುಗಳು ಮಾತ್ರ ಖರೀದಿಗೆ ಮುಂದಾದರು. ಗೊಂಬೆಮಾರುವ ಅಂಗಡಿಯರಿಗೆ ಆಗ ಇನ್ನೊಂದು ಉಪಾಯ ಹೊಳೆಯಿತು.ಪೂತಿ೯ ಹಣಕೊಟ್ಟು ಕೊಳ್ಳಲಾಗದವರಿಗೆ ಗೊಂಬೆಯನ್ನು ಕೊಟ್ಟು ಪ್ರತಿ ತಿಂಗಳು ಹಣ ವಸೂಲಿ ಮಾಡಿದರಾಯಿತು ಎಂದು ಅಂಗಡಿದಾರರು ಯೋಚಿಸಿದರು. ಇದಕ್ಕೆ ಬ್ಯಾಂಕ್‍ನವರು ಕೂಡಾ ಇನ್ನಷ್ಟು ಸಾಲವನ್ನು ಕೊಟ್ಟರು. ಅಂಗಡಿಯವರು ಕೂಡಾ ತಮ್ಮ ಗೋಡೌನ್‍ಗಳನ್ನು ಮತ್ತೆ ಭತಿ೯ ಮಾಡಿಕೊಂಡರು. ಕೈತುಂಬಾ ಹಣವಿರದ ಬಡ ಮಕ್ಕಳ ಪೋಷಕರು ಕೂಡಾ ಕೈಗೆಟುಕದ ಗೊಂಬೆಯನ್ನು ಕೊಳ್ಳುವಂತಹ ಸುದಿನಗಳು ಬಂದವು. ಸರಳವಾಗಿ ಸಿಗುತ್ತಿದ್ದ ದುಬಾರಿ ಗೊಂಬೆಯನ್ನು ಆಸೆಪಟ್ಟು ಸುಮಾರು ಮಂದಿ ಬಡ ಪಾಲಕರು ದುಡ್ಡು ಕೊಡದೆ ಸಾಲವಾಗಿ ಗೊಂಬೆ ಕೊಂಡರು. ಆ ಬಡವರಿಂದ ಈ ಸಾಲವನ್ನು ಹಿಂದಿರುಗಿಸಲು ಸಾಧ್ಯವೇ ಎಂಬುದನ್ನು ಚಿಂತಿಸದೆ ಗೊಂಬೆ ಅಂಗಡಿಯರು ಗೊಂಬೆಗಳನ್ನು ಮಾರಿಬಿಟ್ಟರು.


ಅದೇಕೋ ಬರಬರುತ್ತಾ ಮಕ್ಕಳಿಗೆ ಗೊಂಬೆ ಮೇಲಿನ ಪ್ರೀತಿ ಕಡಿಮೆಯಾಗುತ್ತಾ ಹೋಯಿತು. ಹಾಗಾಗಿ ಕ್ರಮೇಣ ಗೊಂಬೆ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗತೊಡಗಿತು.ಈ ಮರದ ಗೊಂಬೆಗಳ ಮಾರಾಟ ಆಮೆಯ ವೇಗಕ್ಕಿಂತ ಕಡಿಮೆಯಾಗತೊಡಗಿತು. ಗೊಂಬೆಗಳ ಬೆಲೆ ತಿರುಗಿ 500 ರಿಂದ 50 ರೂಪಾಯಿಗೆ ದಢಾರನೆ ಕುಸಿಯಿತು. ಇದರ ಸಾಲ ತಿರಸಲಾಗದೇ ಬಡವರು ಒದ್ದಾಡಿದರು. ಗೊಂಬೆ ಅಂಗಡಿಯವರು ಗೋಡೌನ್‍ಗಳಲ್ಲಿ ಇದ್ದ ಗೊಂಬೆಗಳನ್ನು ಮಾರಲಾಗದೆ ತಿಣುಕಾಡಿದರು. ಮಾರಿದ ಗೊಂಬೆಗಳ ದುಡ್ಡು ವಸೂಲು ಮಾಡಲಾಗದೆ ತಿಪ್ಪರಲಾಗ ಹಾಕಲು ಶುರುವಿಟ್ಟುಕೊಂಡರು. ಬ್ಯಾಂಕಿನ ಸಾಲವನ್ನು ತೀರಿಸಲಾಗದೆ ರಾತ್ರೋರಾತ್ರಿ ಅನೇಕರು ಅಂಗಡಿ ಮುಚ್ಚಿಕೊಂಡು ಹೋದರು. ಅಂಗಡಿಯಲ್ಲಿ ಕೆಲಸಮಾಡುವವರು ಕೆಲಸ ಕಳೆದು ಕೊಂಡರು. ಅಂಗಡಿಗಳಿಗೆ ಸಾಲಕೊಟ್ಟ ಬ್ಯಾಂಕ್‍ಗಳು ಬೀದಿಗೆ ಬಂದವು.ನೆಲಕ್ಕುರುಳಿದ ಆಸೆಬುರುಕ ಇನ್ವೆಸ್ಟ್ ಮೆಂಟ್ ಬ್ಯಾಂಕ್‍ಗಳೇ ಈ ಗೊಂಬೆ ಅಂಗಡಿಗಳು. ಕೈಗೆಟುಕದ ಗೊಂಬೆ ಖರಿದಿಸಿ ಒದ್ದಾಡಿದ ಆ ಆಸೆಬುರುಕ ಪಾಲಕರೇ ಸಬ್-ಪ್ರೈಮ್ ಮಾರ್ಟಗೇಜ್‍ನಲ್ಲಿ ಮನೆ ಖರೀದಿಸಿದವರು, ಗೋಡೌನ್‍ನಲ್ಲಿ ಕೂಳೆತು ನಾರುತ್ತಿರುವ ಗೊಂಬೆಗಳೇ ಇನ್ವೆಸ್ಟ್‍ಮೆಂಟ್ ಬ್ಯಾಂಕ್‍ಗಳು ಮಾರಲಾಗದೇ ಇರುವ ವಿಷಪೂರಿತ ಸಬ್-ಪ್ರೈಮ್ ಮಾರ್ಟಗೇಜ್‍ ಮತ್ತು ಫಂಡುಗಳು. ಸಾಲಕೊಟ್ಟು ಶೂಲಕ್ಕೇರಿದ ಆಸೆಬುರುಕ ಬ್ಯಾಂಕ್‍ಗಳೇ ದುಡ್ಡು ಹಾಕಿ ಕೈ ಸುಟ್ಟುಕೊಂಡ ಶೇರು ಹೋಲ್ಡರ್‌ಗಳು. ***

ಈ ಉದಾಹರಣೆ ನೂರಕ್ಕೆ ನೂರರಷ್ಟು ವಾಲ್‍ಸ್ಟ್ರೀಟ್‍ನ ಪತನದ ಹೋಲಿಕೆ ಅಲ್ಲದಿದ್ದರೂ, ಅಲ್ಲಿ ನಡೆದ್ದುದಾದರು ಏನು ಎಂಬುದನ್ನು ಗ್ರಹಿಸಲು ಈ ಉದಾಹರಣೆ ನೆರವಾಗುತ್ತದೆ ಎಂದು ಭಾವಿಸುತ್ತೇನೆ. ಇದೆಲ್ಲಾ ರಂಪಾಟಕ್ಕೆ ಕಾರಣ ಒಂದೇ. ಇವರೆಲ್ಲರಲ್ಲಿ ಇದ್ದ "ಅತಿ ಆಸೆ". ಆಸೆಯೇ ದುಖಃಕ್ಕೆ ಮೂಲ ಕಾರಣ ಎಂಬ ಗೌತಮ ಬುದ್ಧನ ಮಾತು ಪುನಃ ನೂರಕ್ಕೆ ನೂರರಷ್ಟು ಸತ್ಯವಾಯಿತು! 2008ನೇ ವಷ೯ ಇವರೆಲ್ಲರಿಗೂ ಮರೆಯಲಾಗದ ಪಾಠ ಕಲಿಸಿತು.

31 ಡಿಸೆಂಬರ್ 2008. ಸಮಯ ಸಂಜೆ 5.30. ಈ ವಷ೯ದ ಕೊನೆಯ ಟ್ರೇಡಿಂಗ್ ಡೇ ಮುಗಿದಿದೆ. ನನ್ನ ಕಂಪನಿಯ ಟ್ರೇಡಿಂಗ್ ಪ್ಲೋರ್‌ನಲ್ಲಿ ಕುಳಿತು ಈ ಲೇಖನದ ಕೊನೆಯ ಸಾಲುಗಳನ್ನು ಬರೆದಿದ್ದೇನೆ. ವಾಲ್‍ಸ್ಟ್ರೀಟ್‍ನ ಇತಿಹಾಸದಲ್ಲಿ ಕಪ್ಪು ಚುಕ್ಕೆ ಇಟ್ಟ ಈ 2008ನೇ ವಷ೯ವೇ ವಾಷಿಂಗ್ಟನ್‍ನ ಬಿಳಿಮನೆಗೆ ಕರಿಯನನ್ನು ಕಳುಹಿಸಿಕೊಟ್ಟಿದೆ. ಅಮೆರಿಕಾದ ಮುಂದಿನ ವಷ೯ದ ಇತಿಹಾಸದಲ್ಲಿ ಈ ಮುದ್ದಿನ ಕರಿಯನ ನೆರಳು "ಕರಿನೆರಳು" ಆಗದಿರಲ್ಲೆಂದು ಆಶಿಸುತ್ತಾ, ಹೊಸ ವಷ೯ದ ಕಡೆಗೆ ಆಸೆ ಕಣ್ಣುಗಳಿಂದ ನೋಡುತ್ತಿರುವ ನಿಮಗೆಲ್ಲಾ ಹೊಸ ವರ್ಷದ ಶುಭಾಶಯಗಳು.


- ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯