ವಾಲ್‍ಸ್ಟ್ರೀಟ್‍ನಲ್ಲಿ ರಕ್ತಪಾತ!

ಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ...


ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು ಮುಂದೇನು? ಎಂದು ಯೋಚಿಸುತ್ತಾ ಕುಂತಿರುವ ಹಾಗೆ ನನಗೆ ಅನಿಸುತ್ತಿದೆ. ಈ ದೇಶದ ಇತಿಹಾಸದ ಪುಟಗಳ ಮೇಲೆ ದಪ್ಪವಾಗಿ ಕಪ್ಪು ಅಕ್ಷರಗಳಲ್ಲಿ 2008ನೇ ವಷ೯ದ ಕಥೆಗಳನ್ನು ಬರೆಯಬೇಕಾಗುರುವುದು ಬಹಳಷ್ಟಿದೆ. ವಾಲ್ ಸ್ಟ್ರೀಟ್ ನಲ್ಲಿ ಈ ಇಡೀ ವಷ೯ ನಡೆದ ಅಂಕಲ್ ಸ್ಯಾಮ್‍ನ ಮುದ್ದಿನ ಡಾಲರಿನ ರಕ್ತಪಾತ ಕಂಡು ನಿಬ್ಬೆರಗಾದ ಜಾಗತಿಕ ಹೂಡಿಕೆದಾರರು ನಾಗಾಲೋಟದಲ್ಲಿ ಪಾತಾಳ ಸೇರಿಕೊಂಡಿದ್ದಾರೆ.ಸಿಕ್ಕಾಪಟ್ಟೆ ಬೋನಸ್ ಗಳು, ಆಕಷ೯ಕವಾದ ಶೇರು ಹೂಡಿಕೆದಾರರ ಲಾಭಾಂಶ, ಒಂದರ ಮೇಲೆ ಮತ್ತೊಂದು ಹಗರಣಗಳು, ಡಾಟ್ ಕಾಮ್‍ನ ಪತನ... ಈ ಯಾವುದೇ ಅಂಶಗಳನ್ನು ಲೆಕ್ಕಿಸದೆ ವಾಲ್ ಸ್ಟ್ರೀಟ್‍ನ ಬಂಡವಾಳ ಹೂಡಿಕೆ ಬ್ಯಾಂಕುಗಳು ಹಾಗು ರೆಗುಲೇಶನ್ ರಹಿತ ಹೇಡ್ಝ್ ಫಂಡುಗಳು ಹತೋಟಿಗೂ ಮೀರಿ 2006ನೇ ವಷ೯ದ ಅಂತ್ಯದ ವೇಳೆಗಾಗಲೇ ತಲೆ ಎತ್ತಿ ನಿಂತುಕೊಂಡಿದ್ದವು. ಹೀಗೆ ಜಾಲಿ ರೈಡ್‍ನಲ್ಲಿ ತೇಲಾಡುತ್ತಿದ್ದ ವಾಲ್ ಸ್ಟ್ರೀಟ್‍ಗೆ ಮೊದಲ ಸಿಡಿಲು ಬಡೆದದ್ದು 31ನೇ ಅಕ್ಟೋಬರ್ 2007ರಂದು.

ನಾನು ಈಗ ಕೆಲಸಮಾಡುವ ಕಂಪನಿಯಲ್ಲಿ ಹಿರಿಯ ವಿಶ್ಲೇಷಕಿಯಾಗಿ ಕೆಲಸಮಾಡುತ್ತಿರುವ ಮೇರಿಡೆತ್ ವಿಟ್ನಿ ಎಂಬ ಸರಳ, ಸಿದಾಸಾದಾ ಮಹಿಳೆ ಅಂದು ಹೇಳಿದ್ದು ಏನೆಂದರೆ; 'ಸಿಟಿ ಗ್ರೂಪ್ ಕಂಪನಿ ತನ್ನ ಬಂಡವಾಳ ನಿವ೯ಹಣೆಯಲ್ಲಿ ತುಂಬಾ ತಪ್ಪುಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಶೇರುದಾರರು ಇದರತ್ತ ಗಮನಹರಿಸಬೇಕು'. ಅವಳು ಅಷ್ಟು ಹೇಳಿದ್ದೇ ತಡ ಅಂದಿನ ದಿನದ ಟ್ರೇಡಿಂಗ್ ಮುಗಿಯುವ ಹೊತ್ತಿಗೆ ಸುಮಾರು 350 ಬಿಲಿಯನ್ ಡಾಲರ್‌ಗಳಷ್ಟು ಮೊತ್ತದ ಬ್ಯಾಂಕ್‍ಗಳ ಶೇರುಗಳು ನೆಲಕ್ಕುರುಳಿದವು.ಇದಾದ ನಾಲ್ಕುದಿನಗಳ ಅಂತರದಲ್ಲಿ ಸಿ.ಟಿ. ಗ್ರೂಪಿನ ಸಿ.ಇ.ಓ ರಾಜೀನಾಮೆ ನೀಡಿದ್ದಲ್ಲದೆ, ಕಂಪನಿಯ ಲಾಭಾಂಶದಲ್ಲಿ ಕಡಿತ ಘೋಷಿಸಲಾಯಿತು. "ಸಬ್-ಪ್ರೈಮ್ ಮಾರ್ಟಗೇಜ್" ಎಂಬ ಖೆಡ್ಡಾದಲ್ಲಿ ಸಿಟಿ ಬ್ಯಾಂಕ್ ಎಂಬ ಆನೆ ಮುಗ್ಗರಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸುಮಾರು 20,000 ಸಿ.ಟಿ ಗ್ರೂಪ್ ಉದ್ಯೋಗಿಗಳನ್ನು ಮನೆಗೆ ಕಳಿಸುವುದಾಗಿ ಕಂಪನಿ ಪ್ರಕಟಿಸಿತು. ಅಲ್ಲಿಂದ ಶುರುವಾಯಿತು ನೋಡಿ ಆ ಖೆಡ್ಡಾದಲ್ಲಿ ಬಿದ್ದ ದೊಡ್ದ ದೊಡ್ಡ ಆನೆಗಳನ್ನು ಹೊರತೆಗೆಯುವ ಕೆಲಸ.



















9 ಮಾಚ್೯ 2008ರಲ್ಲಿ ಸುಮಾರು 80 ವಷ೯ಗಳಿಗೂ ಹಳೆಯದಾದ ಪ್ರತಿಷ್ಠಿತ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಬ್ಯಾಂಕುಗಳಲ್ಲಿ ಒಂದಾದ ಬಿಯರ್-ಸ್ಟಯರ್ನ್ಸ್ ಕೂಡಾ ಇದೇ ಖೆಡ್ಡಾದಲ್ಲಿ ಬಿದ್ದು ಕುಸಿಯುವ ಹಂತದಲ್ಲಿದಾಗ ಪ್ರತಿ ಶೇರಿಗೆ 10 ಡಾಲರಿನಂತೆ ಜೆ.ಪಿ.ಮಾರ್ಗನ್ ಚೇಜ್ ಬ್ಯಾಂಕಿಗೆ ಅಗ್ಗ ದರದಲ್ಲಿ ಬಿಕರಿಯಾಯಿತು. ಇದೇ ರೀತಿ 150 ವಷ೯ಗಳಿಗೂ ಹಳೆಯದಾದ ಲಿಮನ್ ಬ್ರದರ್ಸ್ ಬ್ಯಾಂಕು ಕೂಡಾ ರಾತ್ರೋ ರಾತ್ರಿ ಹೇಳಹೆಸರಿಲ್ಲದೆ ಮಂಗಮಾಯವಾಯಿತು. "ಸಬ್-ಪ್ರೈಮ್ ಮಾರ್ಟಗೇಜ್" ಎಂಬ ಖೆಡ್ಡಾದಲ್ಲಿ ಬಿದ್ದವರ ಪಟ್ಟಿ ಹನುಮಂತನ ಬಾಲದ ರೀತಿ ಬೆಳೆಯುತ್ತಲೇ ಹೋಯಿತು. ಇಂಡಿಮ್ಯಾಕ್, ಫ್ರೆಡಿ ಮ್ಯಾಕ್, ಪ್ಯ್ಹಾನಿ ಮೇ, ಎ. ಐ.ಜಿ, ಮೇರಿಲೀಂಚ್, ಗೊಲ್ಡ್ಮನ್ ಸಾಕ್ಸ್ ಇನ್ನೂ ಅನೇಕ ವಾಲ್ ಸ್ಟ್ರೀಟ್‍ನ ಬಿಳಿಯಾನೆಗಳು ಅಂಗಾತ ಮಲಗಿಕೊಂಡವು. ಇದರೊಂದಿಗೆ ಬಿಲಿಯನ್ ಗಟ್ಟಲೆ ಶೇರುದಾರರು ಡಾಲರ್‌ಗಳನ್ನು ಹಾಗೂ ಲಕ್ಷಾಂತರ ಜನಗಳು ಕೆಲಸಗಳನ್ನು ಕಳೆದುಕೊಂಡರು.


ಇದಕ್ಕೆಲ್ಲಾ ಮೂಲ ಕಾರಣಗಳೇನು? ಈ "ಸಬ್-ಪ್ರೈಮ್ ಮಾರ್ಟಗೇಜ್" ಎಂದರೇನು? ಈ ಪರಿಸ್ಥಿತಿ ಹೇಗೆ ಬಂದಿತು? ವಿವರಿಸುವುದು ಸ್ವಲ್ಪ ಕಷ್ಟದ ಕೆಲಸ. ಖ್ಯಾತ ರೇಡಿಯೊ ಟಾಕ್ ಹೋಸ್ಟ್ "ಗ್ಲೇನ್ ಬ್ಯಾಕ್" ವಿವರಿಸುವ ರೀತಿ ಒಂದು ಸರಳ ಉದಾಹರಣೆಯನ್ನು ಮುಂದಿಟ್ಟುಕೊಂಡು ನಿಮಗೆ ವರದಿ ಒಪ್ಪಿಸಲು ಮುಂದಾಗುತ್ತೇನೆ.



***ಸುಮ್ಮನೆ ಹಾಗೆ ಊಹಿಸಿಕೊಳ್ಳಿ. ಇಸವಿ 2005ರ ಅಂಚಿನಲ್ಲಿ ಕನ್ನಡನಾಡಿನ ಕೆಲವು ಕಂದಮ್ಮಗಳಿಗೆ ಚನ್ನಪಟ್ಟಣದ ಮರದಲ್ಲಿ ಮಾಡಿದ ಚೆಲುವಿನ ಗೊಂಬೆ ಮೇಲೆ ತುಂಬಾ ಪ್ರೀತಿ ಹುಟ್ಟಿಕೊಂಡು ಬಿಟ್ಟಿತು. ಈ ಮಕ್ಕಳ ಪೋಷಕರು ಮುಗಿಬಿದ್ದು ಮರದ ಗೊಂಬೆಗಳನ್ನು ಕೊಂಡುಕೊಳ್ಳತೊಡಗಿದರು. ನೋಡು ನೋಡುತ್ತಿದಂತೆ 50 ರೂಪಾಯಿಯ ಈ ಗೊಂಬೆ 100 ರೂಪಾಯಿಗೆ ಏರಿತು. ಇದನ್ನು ಗಮನಿಸಿದ ಗೊಂಬೆಮಾರುವ ಅಂಗಡಿಯವರು ದುಡ್ಡು ಮಾಡಲು ಇದು ಒಳ್ಳೆಯ ಸಮಯ ಅಂದುಕೊಂಡರು. ಕನ್ನಡನಾಡಿನ ಮೂಲೆ ಮೂಲೆಗೂ ನಾವು ಗೊಂಬೆ ಮಾರಿದರೆ ಲಕ್ಷಾಧಿಪತಿಗಳಾಗಬಹುದು ಎಂದು ಊಹಿಸಿಕೊಂಡರು. ಆದರೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಗೊಂಬೆಗಳನ್ನು ಕೊಳ್ಳಲು ಅವರಲ್ಲಿ ಹಣವಿರಲ್ಲಿಲ್ಲ. ಆಗ ಅವರು ಬ್ಯಾಂಕಿನವರ ಹತ್ತಿರ ಸಾಲಕ್ಕಾಗಿ ಹೋದರು. ಬ್ಯಾಂಕ್‍ನವರು ಕೂಡಾ ಇದು ಒಳ್ಳೆಯ ಉಪಾಯ ಅಂದುಕೊಂಡು ಸಾಲವನ್ನು ಕೊಟ್ಟರು. ಸಾಲಮಾಡಿ ಗೊಂಬೆ ಅಂಗಡಿಯವರು ತಮ್ಮ ಗೋಡೌನ್‍ಗಳನ್ನು ಭತಿ೯ ಮಾಡಿಕೊಂಡು ಗೊಂಬೆ ಮಾರಾಟಕ್ಕೆ ನಿಂತರು.


ಈ ಮರದ ಗೊಂಬೆ ಕನಾ೯ಟಕದ ಎಲ್ಲಾ ಪಟ್ಟಣಗಳಿಂದ ಹಿಡಿದು ಹಳ್ಳಿಗಳವರೆಗೂ ಮನೆಮಾತಾಯಿತು. ಹಾಗಾಗಿ, ಗೊಂಬೆ ಬೆಲೆ 500 ರೂಪಾಯಿಗೆ ಏರಿತು. ಗೊಂಬೆ ಮಾರುವ ಅಂಗಡಿಯವರು ಮಾರಾಟದ ಭರಾಟೆಯನ್ನು ನೋಡಿ ಕುಣಿದಾಡಿದರು. ಸ್ವಲ್ಪ ದಿನದಲ್ಲೇ ಸುಮಾರು ದುಡ್ಡು ಮಾಡಿಕೊಂಡರು. ಆದರೆ ಗೊಂಬೆ ಬೆಲೆ ಜಾಸ್ತಿ ಆಗಿದ್ದರಿಂದ ಶ್ರೀಮಂತರು ಹಾಗು ಕೆಲವು ಮಧ್ಯಮ ವಗ೯ದ ಫೊಷಕರುಗಳು ಮಾತ್ರ ಖರೀದಿಗೆ ಮುಂದಾದರು. ಗೊಂಬೆಮಾರುವ ಅಂಗಡಿಯರಿಗೆ ಆಗ ಇನ್ನೊಂದು ಉಪಾಯ ಹೊಳೆಯಿತು.ಪೂತಿ೯ ಹಣಕೊಟ್ಟು ಕೊಳ್ಳಲಾಗದವರಿಗೆ ಗೊಂಬೆಯನ್ನು ಕೊಟ್ಟು ಪ್ರತಿ ತಿಂಗಳು ಹಣ ವಸೂಲಿ ಮಾಡಿದರಾಯಿತು ಎಂದು ಅಂಗಡಿದಾರರು ಯೋಚಿಸಿದರು. ಇದಕ್ಕೆ ಬ್ಯಾಂಕ್‍ನವರು ಕೂಡಾ ಇನ್ನಷ್ಟು ಸಾಲವನ್ನು ಕೊಟ್ಟರು. ಅಂಗಡಿಯವರು ಕೂಡಾ ತಮ್ಮ ಗೋಡೌನ್‍ಗಳನ್ನು ಮತ್ತೆ ಭತಿ೯ ಮಾಡಿಕೊಂಡರು. ಕೈತುಂಬಾ ಹಣವಿರದ ಬಡ ಮಕ್ಕಳ ಪೋಷಕರು ಕೂಡಾ ಕೈಗೆಟುಕದ ಗೊಂಬೆಯನ್ನು ಕೊಳ್ಳುವಂತಹ ಸುದಿನಗಳು ಬಂದವು. ಸರಳವಾಗಿ ಸಿಗುತ್ತಿದ್ದ ದುಬಾರಿ ಗೊಂಬೆಯನ್ನು ಆಸೆಪಟ್ಟು ಸುಮಾರು ಮಂದಿ ಬಡ ಪಾಲಕರು ದುಡ್ಡು ಕೊಡದೆ ಸಾಲವಾಗಿ ಗೊಂಬೆ ಕೊಂಡರು. ಆ ಬಡವರಿಂದ ಈ ಸಾಲವನ್ನು ಹಿಂದಿರುಗಿಸಲು ಸಾಧ್ಯವೇ ಎಂಬುದನ್ನು ಚಿಂತಿಸದೆ ಗೊಂಬೆ ಅಂಗಡಿಯರು ಗೊಂಬೆಗಳನ್ನು ಮಾರಿಬಿಟ್ಟರು.


ಅದೇಕೋ ಬರಬರುತ್ತಾ ಮಕ್ಕಳಿಗೆ ಗೊಂಬೆ ಮೇಲಿನ ಪ್ರೀತಿ ಕಡಿಮೆಯಾಗುತ್ತಾ ಹೋಯಿತು. ಹಾಗಾಗಿ ಕ್ರಮೇಣ ಗೊಂಬೆ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗತೊಡಗಿತು.ಈ ಮರದ ಗೊಂಬೆಗಳ ಮಾರಾಟ ಆಮೆಯ ವೇಗಕ್ಕಿಂತ ಕಡಿಮೆಯಾಗತೊಡಗಿತು. ಗೊಂಬೆಗಳ ಬೆಲೆ ತಿರುಗಿ 500 ರಿಂದ 50 ರೂಪಾಯಿಗೆ ದಢಾರನೆ ಕುಸಿಯಿತು. ಇದರ ಸಾಲ ತಿರಸಲಾಗದೇ ಬಡವರು ಒದ್ದಾಡಿದರು. ಗೊಂಬೆ ಅಂಗಡಿಯವರು ಗೋಡೌನ್‍ಗಳಲ್ಲಿ ಇದ್ದ ಗೊಂಬೆಗಳನ್ನು ಮಾರಲಾಗದೆ ತಿಣುಕಾಡಿದರು. ಮಾರಿದ ಗೊಂಬೆಗಳ ದುಡ್ಡು ವಸೂಲು ಮಾಡಲಾಗದೆ ತಿಪ್ಪರಲಾಗ ಹಾಕಲು ಶುರುವಿಟ್ಟುಕೊಂಡರು. ಬ್ಯಾಂಕಿನ ಸಾಲವನ್ನು ತೀರಿಸಲಾಗದೆ ರಾತ್ರೋರಾತ್ರಿ ಅನೇಕರು ಅಂಗಡಿ ಮುಚ್ಚಿಕೊಂಡು ಹೋದರು. ಅಂಗಡಿಯಲ್ಲಿ ಕೆಲಸಮಾಡುವವರು ಕೆಲಸ ಕಳೆದು ಕೊಂಡರು. ಅಂಗಡಿಗಳಿಗೆ ಸಾಲಕೊಟ್ಟ ಬ್ಯಾಂಕ್‍ಗಳು ಬೀದಿಗೆ ಬಂದವು.ನೆಲಕ್ಕುರುಳಿದ ಆಸೆಬುರುಕ ಇನ್ವೆಸ್ಟ್ ಮೆಂಟ್ ಬ್ಯಾಂಕ್‍ಗಳೇ ಈ ಗೊಂಬೆ ಅಂಗಡಿಗಳು. ಕೈಗೆಟುಕದ ಗೊಂಬೆ ಖರಿದಿಸಿ ಒದ್ದಾಡಿದ ಆ ಆಸೆಬುರುಕ ಪಾಲಕರೇ ಸಬ್-ಪ್ರೈಮ್ ಮಾರ್ಟಗೇಜ್‍ನಲ್ಲಿ ಮನೆ ಖರೀದಿಸಿದವರು, ಗೋಡೌನ್‍ನಲ್ಲಿ ಕೂಳೆತು ನಾರುತ್ತಿರುವ ಗೊಂಬೆಗಳೇ ಇನ್ವೆಸ್ಟ್‍ಮೆಂಟ್ ಬ್ಯಾಂಕ್‍ಗಳು ಮಾರಲಾಗದೇ ಇರುವ ವಿಷಪೂರಿತ ಸಬ್-ಪ್ರೈಮ್ ಮಾರ್ಟಗೇಜ್‍ ಮತ್ತು ಫಂಡುಗಳು. ಸಾಲಕೊಟ್ಟು ಶೂಲಕ್ಕೇರಿದ ಆಸೆಬುರುಕ ಬ್ಯಾಂಕ್‍ಗಳೇ ದುಡ್ಡು ಹಾಕಿ ಕೈ ಸುಟ್ಟುಕೊಂಡ ಶೇರು ಹೋಲ್ಡರ್‌ಗಳು. ***

ಈ ಉದಾಹರಣೆ ನೂರಕ್ಕೆ ನೂರರಷ್ಟು ವಾಲ್‍ಸ್ಟ್ರೀಟ್‍ನ ಪತನದ ಹೋಲಿಕೆ ಅಲ್ಲದಿದ್ದರೂ, ಅಲ್ಲಿ ನಡೆದ್ದುದಾದರು ಏನು ಎಂಬುದನ್ನು ಗ್ರಹಿಸಲು ಈ ಉದಾಹರಣೆ ನೆರವಾಗುತ್ತದೆ ಎಂದು ಭಾವಿಸುತ್ತೇನೆ. ಇದೆಲ್ಲಾ ರಂಪಾಟಕ್ಕೆ ಕಾರಣ ಒಂದೇ. ಇವರೆಲ್ಲರಲ್ಲಿ ಇದ್ದ "ಅತಿ ಆಸೆ". ಆಸೆಯೇ ದುಖಃಕ್ಕೆ ಮೂಲ ಕಾರಣ ಎಂಬ ಗೌತಮ ಬುದ್ಧನ ಮಾತು ಪುನಃ ನೂರಕ್ಕೆ ನೂರರಷ್ಟು ಸತ್ಯವಾಯಿತು! 2008ನೇ ವಷ೯ ಇವರೆಲ್ಲರಿಗೂ ಮರೆಯಲಾಗದ ಪಾಠ ಕಲಿಸಿತು.

31 ಡಿಸೆಂಬರ್ 2008. ಸಮಯ ಸಂಜೆ 5.30. ಈ ವಷ೯ದ ಕೊನೆಯ ಟ್ರೇಡಿಂಗ್ ಡೇ ಮುಗಿದಿದೆ. ನನ್ನ ಕಂಪನಿಯ ಟ್ರೇಡಿಂಗ್ ಪ್ಲೋರ್‌ನಲ್ಲಿ ಕುಳಿತು ಈ ಲೇಖನದ ಕೊನೆಯ ಸಾಲುಗಳನ್ನು ಬರೆದಿದ್ದೇನೆ. ವಾಲ್‍ಸ್ಟ್ರೀಟ್‍ನ ಇತಿಹಾಸದಲ್ಲಿ ಕಪ್ಪು ಚುಕ್ಕೆ ಇಟ್ಟ ಈ 2008ನೇ ವಷ೯ವೇ ವಾಷಿಂಗ್ಟನ್‍ನ ಬಿಳಿಮನೆಗೆ ಕರಿಯನನ್ನು ಕಳುಹಿಸಿಕೊಟ್ಟಿದೆ. ಅಮೆರಿಕಾದ ಮುಂದಿನ ವಷ೯ದ ಇತಿಹಾಸದಲ್ಲಿ ಈ ಮುದ್ದಿನ ಕರಿಯನ ನೆರಳು "ಕರಿನೆರಳು" ಆಗದಿರಲ್ಲೆಂದು ಆಶಿಸುತ್ತಾ, ಹೊಸ ವಷ೯ದ ಕಡೆಗೆ ಆಸೆ ಕಣ್ಣುಗಳಿಂದ ನೋಡುತ್ತಿರುವ ನಿಮಗೆಲ್ಲಾ ಹೊಸ ವರ್ಷದ ಶುಭಾಶಯಗಳು.


- ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯

5 comments:

Prabhuraj Moogi said...

ಚನ್ನಪಟ್ಟಣದ ಗೊಂಬೆ ಉದಾಹರಣೆ ಚೆನ್ನಾಗಿತ್ತು... ಈ ಎಕನಾಮಿಕ್ಸ ಬಗ್ಗೆ ಗೊತ್ತಿಲ್ಲದ ಯಾರಿಗೂ ತಿಳಿಯುವಂತೆ ಬರೆದಿದ್ದೀರಿ... ಹಾಗೆ ನಿಮ್ಮ "ಸುಖ ಪುರುಷನ..." ಲೇಖನದಲ್ಲಿ ಬೇರೆ ದೇಶದಲ್ಲಿ ಎಲ್ಲರೂ ಬೆರೆಯುವ ಪರಿಯ ಬಣ್ಣಿಸಿದ್ದು ತುಂಬಾ ಹಿಡಿಸಿತು...

srf said...

Sir excellent correlating with doll... I like it.. Please write some blogs related to economics and investment


Regards
Shrinidhi

rockzoxygn said...

nimma ee praytnakke nimange abhinandanegalu sir .

jai karnataka

karavali billava said...

Horadeshada Kannadigragi Nimma Sevege Danyavadagalu

Keshav Sasihithlu
Cartoonist / Journalist
Kundapura, Udupi Dist

mlokeshkumar13 said...

ಗೊಂಬೆಯ ಹೋಲಿಕೆ ತುಂಬಾ ಚೆನ್ನಾಗಿದೆ ಸರ್, ಓದಲು ಬರೆಯಲು ಬರುವ ಎಲ್ಲರೂ ಅರ್ಥಮಾಡಿಕೊಳ್ಳಬಹುದಾದಂತ, ಸರಳ ಬಾಷೆಯಾಗಿದೆ

ಧನ್ಯವಾದಗಳೊಂದಿಗೆ
ಲೋಕೇಶ್