ಅಮೇರಿಕನ್ ಮದುವೆಯ ಈ ಬಂಧ ಅನುರಾಗದ ಅನುಬಂಧ

"ಮದುವೆ ಎಂದರೆ ಗಂಡು ಹೆಣ್ಣಿನ ಕನಸುಗಳ ಮೆರವಣಿಗೆಯಷ್ಟೇ ಅಲ್ಲ , ನೆರೆದವರ ಎದೆಗಳಲ್ಲೂ ನೆನಪುಗಳ ಧಾರಾಕಾರ ಮಳೆ. ಅಮೆರಿಕನ್ ಗೆಳೆಯನೊಬ್ಬನ ಮದುವೆಯಲ್ಲಿ ಪಾಲ್ಗೊಂಡ ಅರಿಷಿಣದ ಮೈ ಆರದ ಲೇಖಕ, ತನ್ನ ಮದುವೆಯನ್ನು ನೆನಪಿಸಿಕೊಳ್ಳುವ ಕ್ಷಣಗಳು....."


-ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯

‘ಮದುವೆಯ ಈ ಬಂಧ ಅನುರಾಗದ ಅನುಬಂಧ.....’ ನನ್ನವಳ ಸೋದರಮಾವ ನಮ್ಮ ಮದುವೆಯಲ್ಲಿ ಹಾಡಿದ ಈ ಇಂಪಾದ ಹಾಡು ಇಂದು ಕೂಡಾ ನನ್ನ ಕಿವಿಯಲ್ಲಿ ಗುನುಗುತ್ತಿದೆ. ಎರಡು ತಿಂಗಳ ಅಂತರದಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಂಡ ಎರಡು ರೀತಿಯ(ಪೂರ್ವ-ಪಶ್ಚಿಮ) ಮದುವೆಗಳ ಸೋಗು, ಸರಸ, ಸ್ವಾರಸ್ಯ, ಸಮರಸಗಳನ್ನು ನಿಮಗೆ ತಲುಪಿಸುವ ಪ್ರಯತ್ನವೇ ಈ ಲೇಖನ. ಮೊದಲನೆಯದಾಗಿ ಭಾರತೀಯ-ಕರ್ನಾಟಕದ ಶೈಲಿಯಲ್ಲಿ ನಡೆದ ನನ್ನ ಮತ್ತು ನನ್ನವಳ ನಮ್ಮ ಮದುವೆ, ಇನ್ನೊಂದು ಅಮೇರಿಕನ್ ಶೈಲಿಯಲ್ಲಿ ನಡೆದ ನನ್ನವಳ ಸಹದ್ಯೋಗಿ ‘ರಿಕ್’ ಮತ್ತು ಅವನ ಸಂಗಾತಿ ‘ಜೆಸ್’ ಒಂದಾದ ಮದುವೆ. ಭಾರತೀಯ ಮದುವೆಗಳು ಜಗತ್‌ಪ್ರಸಿದ್ಧ. ಹಾಗಾಗಿ ನಮ್ಮ ಮದುವೆಗಳ ಶಾಸ್ತ್ರ, ಸಡಗರ, ಸಂಭ್ರಮಗಳು ಬಹುಶಃ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ.

ರಿಕ್ ನಮಗೆ ಮದುವೆಯ ಮಮತೆಯ ಕರೆಯೋಲೆಯನ್ನು ಕಳಿಸಿದಾಗ, ಭಾರತದಿಂದ ಹೊಸದಾಗಿ ಮದುವೆಯಾಗಿ ಬಂದ ನಮಗೆ ಅಮೇರಿಕನ್ ವೆಡ್ಡಿಂಗ್ ನೋಡುವ ಕುತೂಹಲ ಸಹಜವಾಗಿ ಮೂಡಿ ಬಂತು. ರಿಕ್ ಮತ್ತು ಜೆಸ್ ಸುಮಾರು ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಹಾಗು ಒಟ್ಟಿಗೆ ವಾಸಿಸುತ್ತಿದ್ದಾರೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸ ಬಯಸುತ್ತೇನೆ. ಅದೇನೆಂದರೆ ‘ಜೆಸ್’ ಎಂಬುದು ಹುಡುಗಿಯ ಹೆಸರು, ಅವಳು ರಿಕ್‌ನ ಕನಸಿನ ಕನ್ಯೆ, ಏಕೆಂದರೆ ಇತ್ತೀಚೆಗೆ ಅಮೇರಿಕಾದಲ್ಲಿ ಹೆಚ್ಚಾಗುತ್ತಿರುವ ಸಲಿಂಗ ಮದುವೆಗಳ ಬಗ್ಗೆ ನೀವು ಕೇಳಿರಬಹುದು. ಅದಕ್ಕಾಗಿ ಈ ಅಮೇರಿಕನ್ ಮದುವೆಗಳ ವಿಚಾರ ಬಂದಾಗ ಲಿಂಗಗಳನ್ನು ಒತ್ತಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಿಕ್‌ಗೆ ಇದು ಮೊದಲನೆಯ ಮದುವೆಯಾದರೆ, ಜೆಸ್‌ಗೆ ಇದು ಎರಡನೆಯದು. ಮೊದಲನೆಯ ಮದುವೆಯಿಂದ ಅವಳಿಗೆ ೧೩ ವರ್ಷದ ಮಗನಿದ್ದಾನೆ. ಕರೆಯೋಲೆಯ ಪ್ರಕಾರ ಅಂದು ಮುಂಜಾನೆ ಚರ್ಚ್‌ನಲ್ಲಿ ಕ್ಯಾಥೋಲಿಕ್ ರೀತಿಯಲ್ಲಿ ಮದುವೆ ಶಾಸ್ತ್ರ . ಸಾಯಂಕಾಲ ರೆಸಾರ್ಟ್‌ನಲ್ಲಿ ರಿಸೆಪ್ಷನ್ ಹಮ್ಮಿಕೊಂಡಿದ್ದರು.


ನಾವು ಮದುವೆಗೆ ಹಾಜರ್ ಆಗುವುದು ಖಾತ್ರಿ ಇದ್ದರೆ, ಮದುವೆಯ ದಿನ ನಾವು ಮಾಡಬೇಕಾದ ಊಟದ ಆಯ್ಕೆಯೊಂದಿಗೆ ಒಂದು ವಾರ ಮುಂಚೆ ತಿಳಿಸುವಂತೆ ರಿಕ್ ಹೇಳಿದ. ನನಗೆ ಕೂಡಲೇ ಎರಡು ಘಟನೆಗಳು ನೆನಪಿಗೆ ಬಂದವು. ಒಮ್ಮೆ ನನ್ನ ಗೆಳೆಯನ್ನೊಬ್ಬನ ಮದುವೆಯಲ್ಲಿ ಊಟಕ್ಕೆ ಬಂದವರನ್ನು ಅರ್ಧಂಬರ್ಧ ಊಟ ಹಾಕಿ ಕೂರಿಸಿ ಅಂಗಡಿಯಿಂದ ಅಕ್ಕಿ ತಂದು ಅನ್ನ ಮಾಡಿ ಬಡಿಸಿದ್ದು, ಹಾಗೂ ಇನ್ನೊಮ್ಮೆ ನಾವು ಬೆಂಗಳೂರಿನಲ್ಲಿ ಗೆಳೆಯನ ತಂಗಿಯ ಮದುವೆ ನಡೆಯುತ್ತಿದ್ದ ಛತ್ರವನ್ನು ಹುಡುಕಿ-ಹುಡುಕಿ ಸಾಕಾಗಿ ಸೋತು ಸುಸ್ತಾಗಿ ಕೊನೆಗೆ ಸಿಕ್ಕ ಯಾವುದೋ ಛತ್ರದಲ್ಲಿ ಯಾರದೋ ಮದುವೆಯಲ್ಲಿ ಮದುವೆಯೂಟ ಮಾಡಿ ಹಸಿವು ತೀರಿಸಿಕೊಂಡು ಬಂದದ್ದು.

ಮದುವೆಯ ದಿನ ಮಧ್ಯಾಹ್ನ ೧೨ರ ಸುಮಾರಿಗೆ ಅವನು ಕೊಟ್ಟ ಮಾಹಿತಿಯ ಪ್ರಕಾರ ಚರ್ಚ್ ಹುಡುಕಿಕೊಂಡು ಹೋಗಿ ಸೇರಿದೆವು. ಹುಡುಕಲೇ ಬೇಕಲ್ಲಾ , ನಮ್ಮ ಮದುವೆಗಳ ತರ ಯಾವುದೋ ಛತ್ರಕ್ಕೆ ನುಗ್ಗುವುದು ಇಲ್ಲಿ ಕಷ್ಟವಾಗಬಹುದು. ಇಲ್ಲಿಯ ಸಂಪ್ರದಾಯದ ಪ್ರಕಾರ ಮದುಮಗ ತನ್ನ ಕಾರನ್ನು ಹತ್ತಿರದ ಸಂಬಂಗಳಿಗೆ ಕೊಟ್ಟು ಮದುಮಗಳನ್ನು ಕರೆದುಕೊಂಡು ಬರಲು ಕಳಿಸುತ್ತಾನೆ. ಅವಳಿಗೋಸ್ಕರ ಚರ್ಚ್ ಮುಂದೆ ಕಾಯುತ್ತಿರುತ್ತಾನೆ, ಮದುಮಗನೊಂದಿಗೆ ಅವನ ‘ಬೆಸ್ಟ್-ಮ್ಯಾನ್’ ಕೂಡ ಹೂವಿನ ಗುಚ್ಛ(ಬುಕ್ಕೆ) ಹಿಡಿದುಕೊಂಡು ನಿಂತಿರುತ್ತಾನೆ. ಬಹುತೇಕ ಮದುವೆಗಳಲ್ಲಿ ‘ಬೆಸ್ಟ್-ಮ್ಯಾನ್’ ಆಗುವವನು ಮದುಮಗನ ಪ್ರಾಣಸ್ನೇಹಿತನಾಗಿರುತ್ತಾನೆ. ಈ ಮದುವೆಯಲ್ಲಿ ಕೂಡಾ ರಿಕ್‌ನ ಬಾಲ್ಯಸ್ನೇಹಿತನಾದ ‘ಜೋಸೆಫ್’ ಆ ಸ್ಥಾನವನ್ನು ಅಲಂಕರಿಸಿದ್ದನು. ನಮ್ಮ ಮದುವೆಗಳಲ್ಲಿ ಈ ರೀತಿಯ ‘ಬೆಸ್ಟ್-ಮ್ಯಾನ್’ ಇಲ್ಲದ್ದಿದ್ದರೂ , ನೀವು ನಿಮ್ಮ ಅಣ್ಣನ ಅಥವಾ ಅಕ್ಕನ ಮದುವೆಯಲ್ಲಿ ಅಥವಾ ಹತ್ತಿರದ ಗೆಳೆಯನ ಮದುವೆಯಲ್ಲಿ ಮಿಂಚಿದ್ದು ನೆನಪಿಸಿಕೊಳ್ಳಬಹುದು. ಇದು ಕೂಡಾ ಅದೇ ರೀತಿಯ ಕಾನ್ಸೆಪ್ಟ್ ಅಂತ ನನಗೆ ಅನಿಸಿತು.

ವಧು ಇದ್ದ ಕಾರು ಚರ್ಚ್ ಮುಂದೆ ಬರುತ್ತಿದ್ದಂತೆ ಬೆಸ್ಟ್-ಮ್ಯಾನ್ ಮುಂದೆ ಹೋಗಿ ಕಾರ್ ಬಾಗಿಲನ್ನು ತೆಗೆದು ಅವಳಿಗೆ ಹೂಗುಚ್ಛ ನೀಡಿ ಕೆನ್ನೆಗೆ ಮುದ್ದು ಕೊಟ್ಟು ಆಲಂಗಿಸಿ ಬರಮಾಡಿಕೊಳ್ಳುತ್ತಾನೆ. ನಮ್ಮ ಮದುವೆಯಲ್ಲಿ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ ನನ್ನನ್ನು ಬರಮಾಡಿಕೊಂಡ ನನ್ನ ಐವರು ನಾದಿನಿಯರು ನನ್ನ ಪಾದಗಳಿಗೆ ನೀರು ಹಾಕಿ, ಓಕಳಿ ಚೆಲ್ಲಿ, ಆರತಿಯನ್ನು ಬೆಳಗಿದರು. ಆದರೆ ಆ ಆರತಿ ತಟ್ಟೆಯಲ್ಲಿ ದೊಡ್ಡ ಮೊತ್ತದ ದಕ್ಷಿಣೆ ಹಾಕುವವರೆಗೆ ನನ್ನನ್ನು ಒಳಗೆ ಬಿಡಲ್ಲಿಲ್ಲ . ಅದಾದ ನಂತರ ಅವರು ಆರತಿ ಹಿಡಿದುಕೊಂಡು ನನ್ನ ಮುಂದೆ ಬಂದರೆ ನನಗೆ ಹೆದರಿಕೆ ಆಗುತ್ತಿತ್ತು ನೋಡಿ! ಇದಾದ ನಂತರ ವಧು-ವರರು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಜೊತೆಯಾಗಿ ಚರ್ಚ್‌ನ ಒಳಗೆ ನಿಧಾನವಾಗಿ ನಡೆದುಕೊಂಡು ಬಂದರು, ಬಹುತೇಕ ಮದುವೆಗಳಲ್ಲಿ ವಧು ತನ್ನ ಆಕರ್ಷಕವಾದ ಬಿಳಿಯ ಬಣ್ಣದ ಮದುವೆಯ ಉಡುಗೆಯಲ್ಲಿ ಕಾಣಿಸಿಕೊಂಡರೆ, ವರ ಕಪ್ಪು ಅಥವಾ ನೀಲಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ. ವಧುವಿನ ಉಡುಗೆ ತುಂಭಾ ದುಬಾರಿ ಬೆಲೆಯದ್ದಾಗಿರುತ್ತದೆ. ಅದಕ್ಕಾಗಿ ತುಂಬಾ ಮದುವೆಗಳಲ್ಲಿ ಈ ಉಡುಗೆಗಳನ್ನು ಬಾಡಿಗೆಗೆ ತರುವುದುಂಟು. ನಮ್ಮಲ್ಲಿ ಮದುವೆ ಸೀರೆಗಳನ್ನು ಬಾಡಿಗೆ ತರಲು ಶುರು ಮಾಡಿದರೆ ನಮ್ಮ ಸೀರೆ ಅಂಗಡಿಗಳ ವ್ಯಾಪಾರದ ಗತಿ ಏನಾಗಬೇಕು ಹೇಳಿ?

ಇದಾದ ನಂತರ ಮದುವೆಗೆ ಬಂದ ಎಲ್ಲರೂ ಚರ್ಚ್‌ನ ಒಳಗೆ ಹೋಗಿ ಆಸೀನರಾದೆವು. ನಮ್ಮ ಮದುವೆಯಲ್ಲಿ ಇಷ್ಟು ಸುಲಭವಾಗಿ ಮದುವೆಯ ಶಾಸ್ತ್ರಗಳು ಶುರುವಾಗುವುದಿಲ್ಲ . ಮದುವೆ ಗಂಡು ಕಾಶೀ ಯಾತ್ರೆಗೆ ಹೊರಡಲು ಸಿದ್ಧನಾಗಬೇಕು, ವಧುವಿನ ತಂದೆ-ತಾಯಿಗಳು ಬಂದು ವರನನ್ನು ಮದುವೆಗೆ ಒಪ್ಪಿಸಿಕೊಂಡು ವಾಪಸ್ಸು ಕರೆದುಕೊಂಡು ಬರಬೇಕು. ನಮ್ಮ ಮದುವೆಯಲ್ಲಿ ನಾನು ಹೀಗೆ ಕಾಶೀ ಯಾತ್ರೆಯ ಶಾಸ್ತ್ರದ ಮೇಲೆ ಹತ್ತಿರದ ದೇವಸ್ಥಾನಕ್ಕೆ ಹೋಗಿ ಕುಳಿತಿದ್ದೆ . ಸುಮಾರು ಹೊತ್ತಾದರೂ ಅವಳ ತಂದೆ-ತಾಯಿಗಳು ನನ್ನತ್ತ ಸುಳಿಯಲಿಲ್ಲ! ಆಗ ನಾನು ಸ್ವಲ್ಪ ಕಸಿವಿಸಿಗೊಂಡದ್ದುಂಟು, ಹಾಗಾಗಿ ಕಾಶೀ ಯಾತ್ರೆಯ ಶಾಸ್ತ್ರಮಾಡಿಸಿಕೊಳ್ಳುವುದು ಸ್ವಲ್ಪ ರಿಸ್ಕಿ ಎಂದು ಹೇಳಬಹುದು.

ಚರ್ಚ್‌ನ ಪಾದ್ರಿಗಳು ನೆರೆದ ಎಲ್ಲಾ ಅತಿಥಿಗಳಿಗೆ ಸ್ವಾಗತ ಕೋರಿದರು. ಅದಾದ ನಂತರ ವಧು, ವರ, ಬೆಸ್ಟ್‌ಮ್ಯಾನ್, ಬ್ರೈಡ್ಸ್‌ಮೇಡ್(ವಧುವಿನ ಸ್ನೇಹಿತೆ) ಈ ನಾಲ್ವರು ಸ್ಟೇಜ್ ಮೇಲೆ ಪಾದ್ರಿಯ ಕಡೆ ಮುಖಮಾಡಿ ಕುಳಿತರು. ರಿಕ್ ತನ್ನ ಮದುವೆಯಲ್ಲಿ ಒಂದು ಶಾಸ್ತ್ರವನ್ನೂ ಕೂಡಾ ಬಿಡದೆ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ, ಇನ್ನೂ ಮದುವೆಯಾಗ ಬೇಕಾಗಿರುವ ಯುವಕ-ಯುವತಿಯರಿಗೆ ನನ್ನ ಒಂದು ಕಿವಿಮಾತು, ನಿಮ್ಮ ಮದುವೆಯಲ್ಲಿ ಶಾಸ್ತ್ರ ಮಾಡಿಸಿಕೊಳ್ಳುವುದೋ? ಬೇಡವೊ ? ಎಂಬ ನಿರ್ಧಾರ ಇಂದು ನಿಮ್ಮ ಕೈಯಲ್ಲಿದೆ ನಿಜ ! ಆದರೆ ಮದುವೆಯ ದಿನ ಮಂಟಪದಲ್ಲಿ ಅದು ನಿಮ್ಮ ಕೈ ಜಾರಿ ಹೋಗುವುದು, ಪುರೋಹಿತರ ಮೌಲ್ಯಭರಿತ ಶಾಸ್ತ್ರದ ಸಾರ್ವಭೌಮತ್ವದ ಮುಂದೆ ನಮ್ಮದು ಏನೂ ನಡೆಯುವುದಿಲ್ಲ . ಎಷ್ಟು ಬೇಡವೆಂದರೂ ನನ್ನ ತಾಯಿ ಮುತ್ತೈದೆಯರನ್ನು ಕರೆದು ನನಗೆ ಕಾಲು ಕೇಜಿ ಅರಿಶಿಣ ಬಡಿದು ಎರಡು ಹಂಡೆ ಬಿಸಿನೀರು ತಲೆ ಮೇಲೆ ಸುರಿದು ಸಮಾಧಾನ ಪಟ್ಟರು. ಪ್ರೀತಿಯ ಭಾವಿ ವಧು-ವರರುಗಳೇ ಸುಮ್ಮನೆ ಕುಳಿತು ಕೊಂಡು ಶಾಸ್ತ್ರ ಮಾಡಿಸಿಕೊಳ್ಳಿ, ಆ ಕ್ಷಣ ಒಂದು ಸಲ ನಿಮ್ಮ ಹೆತ್ತವರ ಕಡೆಗೆ ತಿರುಗಿ ನೋಡಿ, ಅವರ ಕಣ್ಣುಗಳಲ್ಲಿ ಕಾಣುವ ಹೆಮ್ಮೆಭರಿತ ಆನಂದಮಿಶ್ರಿತ ಪ್ರೀತಿಯನೊಮ್ಮೆ ನೋಡಿ ಅದಾದ ನಂತರ ಇನ್ನೊಮ್ಮೆ ನನಗೆ ಶಾಸ್ತ್ರ ಬೇಡವೆಂದು ಹೇಳಲು ನಿಮಗೆ ಮನಸ್ಸು ಬರುವುದಿಲ್ಲ.

ನವಜೋಡಿಯ ಹತ್ತಿರದ ಸಂಬಂಗಳು ಒಬ್ಬೊಬ್ಬರಾಗಿ ಸ್ಟೇಜ್ ಮೇಲೆ ಹೋಗಿ ಬೈಬಲ್‌ನ ಕೆಲವೊಂದು ಆಯ್ದ ಪುಟಗಳನ್ನು ಓದಿದರು. ಅದಾದ ನಂತರ ಪಾದ್ರಿಗಳು ಮದುವೆಯ ಮಹತ್ವವನ್ನು ಸೊಗಸಾಗಿ ವಿವರಿಸಿದರು. ನನಗೆ ತುಂಬಾ ಇಷ್ಟವಾದ ಅವರ ಕೆಲವು ವಾಖ್ಯಾನುಗಳು ಹೀಗಿವೆ ‘ಮದುವೆಯ ಪ್ರಮುಖ ಗುರಿ ಗಂಡು-ಹೆಣ್ಣು ಒಂದೇ ರೀತಿ ಯೋಚಿಸುವುದಲ್ಲ , ಒಂದು ಗೂಡಿ ಯೋಚಿಸುವುದು’, ‘ದಾಂಪತ್ಯದಲ್ಲಿ ಬಿರುಕು ಬರಲು ಕಾರಣ ಪ್ರೀತಿಯ ಬರವಲ್ಲ , ಗೆಳೆತನದ ಬರ!’ ಮುಂತಾದ ನುಡಿ ಮುತ್ತುಗಳು ಮನಸ್ಸಿಗೆ ತಟ್ಟುವಂತಿದ್ದವು. ಇದಾದ ನಂತರ ಪಾದ್ರಿಗಳು ನವಜೋಡಿಯಿಂದ ‘ಸೊಲ್ಮನ್-ಪ್ರಾಮ್ಮಿಸ್’ ಮಾಡಿಸಿದರು. ಈ ಶಾಸ್ತ್ರದಲ್ಲಿ ವಧುವರರಿಬ್ಬರ ಬಲಗೈಗಳನ್ನು ಜೋಡಿಸಿ ದೇವರ ಮುಂದೆ ಕಾಯ-ವಾಚ-ಮನಸಾ ಜೀವನದ ಪ್ರತಿಹಂತದಲ್ಲಿ, ಆರೋಗ್ಯ-ಅನಾರೋಗ್ಯದಲ್ಲಿ, ಸುಖ-ದುಃಖದಲ್ಲಿ, ಸಿರಿ-ಬಡತನದಲ್ಲಿ ಜೊತೆಗಿರುವೆವು ಎಂದು ಪ್ರಮಾಣ ಮಾಡಬೇಕು. ನಂತರ ‘ರಿಂಗ್-ಎಕ್ಸ್‌ಚೇಂಜ್’. ನಮ್ಮ ಮದುವೆಗಳಲ್ಲಿ ತಾಳಿಗೆ ಕೊಡುವ ಪ್ರಾಮುಖ್ಯತೆಯನ್ನು ಇಲ್ಲಿಯವರು ರಿಂಗ್‌ಗೆ ಕೊಡುತ್ತಾರೆ. ಬಹುತೇಕ ಮದುವೆಗಳಲ್ಲಿ ವಜ್ರದ ಉಂಗುರ ವಿನಿಮಯ ಮಾಡಿಕೊಳ್ಳುತ್ತಾರೆ. ನಾವು ‘ಅರಿಶಿಣವೇ ಬೇಕು ತಾಳಿಗೆ’ ಎಂದರೆ - ಇವರು ‘ಡೈಮಂಡೇ ಬೇಕು ರಿಂಗೀಗೆ’ ಎನ್ನುವರು ನೋಡಿ. ಈ ವಾಡಿಕೆ ನಮ್ಮಲ್ಲಿ ಕೂಡಾ ಈಗ ರೂಢಿಗೆ ಬಂದಿದೆ. ಚರ್ಚ್‌ನಲ್ಲಿ ನೆರೆದವರಿಗೆಲ್ಲಾ ಪಾದ್ರಿಗಳು ಎದ್ದು ನಿಲ್ಲಲು ಹೇಳಿ, ತಲೆ ಬಗ್ಗಿಸಿ ನವಜೋಡಿಗೆ ಒಳ್ಳೆಯದಾಗಲಿ ಎಂದು ಮೌನವಾಗಿ ದೇವರಲ್ಲಿ ಪ್ರಾರ್ಥಿಸುವಂತೆ ಹೇಳಿದರು. ದಂಪತಿಗಳನ್ನು ಉದ್ದೇಶಿಸಿ ಪಾದ್ರಿಗಳು ‘ನೀವು ಈ ಕ್ಷಣದಿಂದ ಗಂಡ-ಹೆಂಡಂದಿರು, ರಿಕ್ ನೀನು ನಿನ್ನ ನವವಧುವನ್ನು ಈಗ ಚುಂಬಿಸಬಹುದು’ ಎಂದಾಗ ರಿಕ್ ಮತ್ತು ಜೆಸ್ ಒಬ್ಬರನೊಬ್ಬರು ಭಾವನಾತ್ಮಕವಾಗಿ ಚುಂಬಿಸುತ್ತಾ ಅಲಂಗಿಸಿಕೊಂಡರು, ನೆರೆದವರು ಚಪ್ಪಾಳೆಯ ಮಳೆಗರೆದರು. ನಮ್ಮ ಮದುವೆಗಳ ಗಟ್ಟಿಮೇಳ ಅಲ್ಲಿ ಇದ್ದಿದ್ದರೆ ಮದುವೆಗೆ ಇನ್ನೂ ಮೆರಗು ಬರುತ್ತಿತ್ತು .

ನಮ್ಮಲ್ಲಿ ಬಹಳಷ್ಟು ಜನ ಅವರವರ ಮದುವೆಯ ಗಟ್ಟಿಮೇಳ ಹಾಗು ಅಕ್ಷತೆಗಳ ಸುರಿಮಳೆಯನ್ನು ಜೀವನಪೂರ್ತಿ ಮರೆಯುವುದಿಲ್ಲ . ಅದು ನಮ್ಮೆಲ್ಲರ ಜೀವನದ ಒಂದು ಮಹತ್ವದ ಅಪರೂಪದ ಮರೆಯಲಾಗದ ಕ್ಷಣ. ಆಮೇಲೆ ಶುರುವಾಯಿತು ನೋಡಿ ‘ಫೋಟೊ ಸೆಷನ್’. ಕೂಡಲೆ ನನಗೆ ನೆನಪಾಗಿದ್ದು ನಮ್ಮ ಮದುವೆಯ ಪ್ರಚಂಡ ಫೋಟೊಗ್ರಾಫರ್ ಲಕ್ಷ್ಮೀಕಾಂತರವರು. ಅವರು ಕೇಳುವ ಪೋಸ್ ಕೊಟ್ಟು ಕೊಟ್ಟು ಸುಸ್ತಾಗಿ ಅವರ ಮೇಲೆ ಕೆಲವೊಮ್ಮೆ ಸಿಡಿಮಿಡಿಗೊಂಡದ್ದುಂಟು. ಆದರೆ ಫೋಟೊ ಅಲ್ಬಮ್ ತಯಾರಾಗಿ ಬಂದಾಗ, ಛೇ! ಪಾಪ ಅವರ ಮೇಲೆ ಸುಮ್ಮನೆ ಕೋಪಮಾಡಿಕೊಂಡದ್ದಾಯಿತು ಎನಿಸಿತು. ನಮ್ಮ ವೀಡಿಯೋಗ್ರಾಫರ್‌ಗಳು ಮಾಡುವ ಕೈಚಳಕಗಳನ್ನು ನಾವು ಇಲ್ಲಿ ಮರೆಯುವಂತಿಲ್ಲಾ . ಹುಡುಗನ ವಾಚ್‌ನಲ್ಲಿ ಹುಡುಗಿಯ ಭಾವಚಿತ್ರ, ವಧುವಿನ ಬಿಂದಿಯಲ್ಲಿ ವರನ ಚಿತ್ರ, ಹಾಗೂ ಅಕರ್ಷಕವಾದ ಜಗತ್ತಿನ ಪ್ರಸಿದ್ಧ ಹನಿಮೂನ್ ಸ್ಪಾಟ್‌ಗಳಿಗೆ ನಮ್ಮನ್ನು ಕುಂತಲ್ಲೇ ಕರೆದ್ಯೊಯುವ ಮಹಾನುಭಾವರಿವರು. ಇಲ್ಲಿಗೆ ಚರ್ಚ್‌ನಲ್ಲಿ ನಡೆಯವ ಮದುವೆಯ ಎಲ್ಲಾ ಶಾಸ್ತ್ರಗಳು ಕೊನೆಗೊಂಡವು. ರಿಕ್ ಎಲ್ಲರಿಗೂ ೫ ಗಂಟೆಗೆ ರಿಸ್ಸೆಪ್ಷನ್ ಪಾರ್ಟಿಗೆ ರೆಸಾರ್ಟ್‌ಗೆ ಬರಲು ಹೇಳಿದ. ಮದುವೆಯೂಟ ಎಲ್ಲಿ ? ಎಂದು ಕೇಳಬೇಡಿ, ಅದಕ್ಕಾಗಿ ಸಾಯಂಕಾಲದ ರಿಸ್ಸೆಪ್ಷನ್‌ವರೆಗೆ ಕಾಯಲೇಬೇಕಾಗಿತ್ತು.

ಸಂಜೆ ಸುಮಾರು ೫:೦೦ ಗಂಟೆಗೆ ನಾವು ರೆಸಾರ್ಟ್ ಸೇರಿದೆವು. ಅಂದು ರಿಕ್ ದಂಪತಿಗಳ ಆರತಕ್ಷತೆ ಪಾರ್ಟಿ ತುಂಬಾ ವಿಭಿನ್ನವಾಗಿತ್ತು . ಏಕೆಂದರೆ ಅದೇ ದಿನದಂದು ಅಮೇರಿಕಾದ್ಯಾಂತ ‘ಹಲೋವಿನ್ ಡೇ’ ಆಚರಿಸುವ ದಿನ ಕೂಡ ಆಗಿತ್ತು . ಆದ್ದರಿಂದ ಪಾರ್ಟಿಯಲ್ಲಿ ಹಾಲೋವಿನ್ ವೇಷಭೂಷಣ ಸ್ಪರ್ಧೆಯನ್ನು ಕೂಡಾ ಹಮ್ಮಿಕೊಂಡಿದ್ದರು. ಭೂತ-ಪ್ರೇತ ಹಾಗೂ ಜನಪ್ರಿಯ ವ್ಯಕ್ತಿಗಳ ಹಾಗು ಪ್ರಸಿದ್ಧ ಸಿನಿಮಾ-ಕಾರ್ಟೂನ್ ಪಾತ್ರಗಳ ಮಾರುವೇಷದಲ್ಲಿ ಎಲ್ಲರೂ ಬರುವುದು ರೂಢಿ. ನಾವು ಪಾರ್ಟಿ ಹಾಲ್ ಮುಂದೆ ಹೋಗಿ ನಿಂತಾಗ ದೊಡ್ಡ ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಪಾರ್ಟಿಗೆ ಬರಬೇಕಾಗಿದ್ದ ಎಲ್ಲಾ ಅತಿಥಿಗಳ ಹೆಸರುಗಳು ಮತ್ತು ಅವರು ಕುಳಿತುಕೊಳ್ಳಬೇಕಾದ ಟೇಬಲ್ ನಂಬರುಗಳನ್ನು ಹಾಕಿದ್ದರು. ನಮ್ಮ ಉದ್ದುದ್ದವಾದ ಹೆಸರುಗಳನ್ನು ಆ ಬೋರ್ಡ್‌ನಲ್ಲಿ ಬರೆಯಲು ತುಂಬಾ ಕಷ್ಟಪಟ್ಟೆವೆಂದು ಅಂದು ಮುಂಜಾನೆ ಜೆಸ್ ಹೇಳಿದ ಮಾತು eಪಕಕ್ಕೆ ಬಂತು. ಅದಕ್ಕೆ ಈ ದೇಶಕ್ಕೆ ಬಂದ ನಮ್ಮವರು ಮೊದಲು ಮಾಡುವ ಕೆಲಸ ತಮ್ಮ ಹೆಸರುಗಳಿಗೆ ಕತ್ತರಿ ಹಾಕುವುದು. ಬಹುತೇಕ ಎಲ್ಲರೂ ವಿಚಿತ್ರವಾದ, ಭಯಂಕರವಾದ, ಭೂತಗಳ, ಕಳ್ಳರ, ಕಾಡುಮಾನವರ, ಬ್ಯಾಟ್‌ಮನ್‌ರ ವೇಷದಲ್ಲಿ ಬಂದಿದ್ದರು. ಬಂದವರೆಲ್ಲಾ ತಾವು ತಂದ ಗಿಫ್ಟ್‌ಗಳನ್ನು ಅವರಿಗೊಪ್ಪಿಸಿದರು.

ಮದುವೆಯಲ್ಲಿ ಅಪ್ತರು ಕೊಡುವ ಉಡುಗೊರೆಗಳು ಕೆಲವೊಮ್ಮೆ ತುಂಬಾ ಸಮಯಪ್ರಜ್ಞೆಯುಳ್ಳವಾಗಿರುತ್ತವೆ. ನನಗೆ ನನ್ನ ಮದುವೆಯಲ್ಲಿ ಬಂದ ಗಿಪ್ಟ್‌ಗಳಲ್ಲಿ ತುಂಬಾ ಇಷ್ಟವಾದವುಗಳೆಂದರೆ, ಒಂದು, ನನ್ನ ಒಬ್ಬ ಗೆಳೆಯ ಪ್ರೀತಿಯಿಂದ ಕೊಟ್ಟ ‘ಮೈಸೂರು ಮಲ್ಲಿಗೆ’ ಪುಸ್ತಕ, ಇನ್ನೊಂದು, ಮತ್ತೊಬ್ಬ ಗೆಳೆಯಕೊಟ್ಟ ಅನ್ ಕ್ಯೂಪರ್ ವಿರಚಿತ ‘ಟೆಕ್ನಿಕ್ಸ್-ಆಫ್-ಕಾಮಸೂತ್ರ’ ವೆಂಬ ಪುಸ್ತಕ. ಈ ಭೂಮಿ-ಆಕಾಶ ಇರುವವರೆಗೂ ಹೊಸದಾಗಿ ಮದುವೆಯಾದ ದಂಪತಿಗಳು ಮೈಸೂರು ಮಲ್ಲಿಗೆಯ ಒಂದೊಂದು ಸಾಲುಗಳಲ್ಲಿರುವ ಅಪ್ಸರೆಯ ಚೆಲುವನ್ನು ಆನಂದಿಸುವುದರಲ್ಲಿ ಸಂಶಯವೇ ಇಲ್ಲಾ, ಎರಡನೆಯ ಗಿಫ್ಟ್ ಬಗ್ಗೆ ನಾನು ನಿಮಗೆ ಜಾಸ್ತಿ ಹೇಳುವ ಅಗತ್ಯವಿಲ್ಲ. ಪಾರ್ಟಿಹಾಲ್‌ನ ಬಾರ್ ನಲ್ಲಿದ್ದ ಬೀರು, ರಮ್, ಜಿನ್, ವಿಸ್ಕಿ, ಸ್ಕಾಚ್, ಟಕಿಲಾ ಶಾಟ್ ಮುಂತಾದ ಮಾದಕ ದ್ರವ್ಯಗಳ ಮೇಲೆ ಸುರಾಪಾನ ಮಾಡುವ ಶೂರರು ಮುತ್ತಿಕೊಂಡರು, ಯಾವ ಪಾರ್ಟಿಗೆ ಹೋದರೂ ಈ ದಿನಗಳಲ್ಲಿ ಕಂಡವರ ಕೈಯಲ್ಲಿ ಒಂದು ಡಿಜಿಟಲ್ ಕ್ಯಾಮರಾ ಇದ್ದೇ ಇರುತ್ತೆ ನೋಡಿ. ಎಲ್ಲರೂ ತಮಗೆ ಇಷ್ಟವಾದ ವೇಷಧಾರಿಗಳೊಂದಿಗೆ ನಿಂತು ಕ್ಯಾಮರಾ ಕ್ಲಿಕ್ಕಿಸಿಕೊಂಡರು.

ನಂತರ ಎಲ್ಲರೂ ನಮಗೆ ನಿಗದಿಪಡಿಸಿದ ಟೇಬಲ್‌ಗಳಿಗೆ ಹೋಗಿ ಕುಳಿತೆವು. ಒಂದೊಂದು ರೌಂಡ್ ಟೇಬಲ್‌ಗೆ ಸುಮಾರು ಐದರಿಂದ-ಆರು ಅತಿಥಿಗಳನ್ನು ಕುಳಿತುಕೊಳ್ಳುವಂತೆ ನಿಗದಿಪಡಿಸಿದ್ದರು, ಅಂದಿನ ಪಾರ್ಟಿ ನಿರ್ವಹಣೆ ಮಾಡುತ್ತಿದ್ದ ನಿರೂಪಕ ಎಲ್ಲರನ್ನು ಸ್ವಾಗತಿಸಿದ, ಅದೇ ವೇಳೆಗೆ ರಿಕ್-ಜೆಸ್ ಪಾರ್ಟಿಹಾಲ್‌ನೊಳಗೆ ಜೊತೆಯಾಗಿ ನಡೆದುಕೊಂಡು ಬಂದರು, ಎಲ್ಲರೂ ತಮ್ಮ ತಮ್ಮ ಟೇಬಲ್‌ಗಳ ಮೇಲೆ ಇಟ್ಟಿದ್ದ ಶಾಂಫೆನ್ ಬರಿತ ಗ್ಲಾಸ್‌ಗಳನ್ನು ನವದಂಪತಿಗಳಿಗೆ ಟೋಸ್ಟ್ (ಚಿಯರ್ಸ್) ಮಾಡಿ ಗುಟುಕರಿಸಿದೆವು. ಇದಾದ ಮೇಲೆ ಒಂದು ಚಿಕ್ಕ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅದೇನೆಂದರೆ ಎಲ್ಲಾ ಟೇಬಲ್‌ಗಳ ಮೇಲೆ ೧೦ ಪ್ರಶ್ನೆಗಳಿರುವ ಪತ್ರಿಕೆಯನ್ನು ಇಟ್ಟಿದ್ದರು, ಯಾವ ಟೇಬಲ್‌ನವರು ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳನ್ನು ನೀಡುತ್ತಾರೆಯೋ ಅವರೇ ವಿಜೇತರು. ಎಲ್ಲಾ ಪ್ರಶ್ನೆಗಳು ರಿಕ್ ಮತ್ತು ಜೆಸ್‌ಗೆ ಸಂಬಂಧಪಟ್ಟ ಪ್ರಶ್ನೆಗಳಾಗಿದ್ದವು. ಉದಾಹರಣೆ...ರಿಕ್-ಜೆಸ್ ಎಲ್ಲಿ ಮೊದಲ ಬಾರಿ ಭೇಟಿಯಾದರು ? ಮೊದಲ ಡೇಟಿಂಗ್‌ಗೆ ಎಲ್ಲಿ ಹೋಗಿದ್ದರು ? ಮುಂತಾದವುಗಳು. ನಮ್ಮ ಮದುವೆಗಳಲ್ಲಾಗಿದ್ದರೆ ನಾವು ಯಾವ ತರದ ಪ್ರಶ್ನೆಗಳನ್ನು ಕೇಳಬಹುದು ಎಂದು ನಾನು ಊಹಿಸಿಕೊಂಡೆ. ಹುಡುಗಿಗೆ ಎಷ್ಟು ತೊಲ ಬಂಗಾರ ಹಾಕಿದ್ದಾರೆ ? ಹುಡುಗನಿಗೆ ಎಷ್ಟು ವರದಕ್ಷಿಣೆ ಕೊಟ್ಟಿದ್ದಾರೆ? ಯಾವ ಮದುವೆ ಬ್ರೋಕರ್ ಸಂಬಂಧ ಮಾಡಿಸಿದ್ದು? ಇವೇ ಕೆಲವು ಪ್ರಮುಖ ಪ್ರಶ್ನೆಗಳಾಗಬಹುದು, ಅಲ್ಲವೇ ?

ರಿಕ್ ಮತ್ತು ಜೆಸ್ ಸ್ಟೇಜ್ ಮೇಲೆ ಬಂದು ಇಬ್ಬರು ಒಟ್ಟಿಗೆ ಮದುವೆಯ ಕೇಕ್ ಕಟ್‌ಮಾಡಿದರು, ಅದಾದ ನಂತರ ನವದಂಪತಿಗಳು ಬ್ರಿಯಾನ್ ಆಡಮ್ಸ್‌ನ ‘ಹೆವನ್’ ಎಂಬ ಪ್ರಣಯಭರಿತ ಹಾಡಿಗೆ ತಮ್ಮ ದಾಂಪತ್ಯಜೀವನದ ಮೊದಲ ನೃತ್ಯ ಮಾಡಿದರು. ಅದಾದ ಮೇಲೆ ನಾನು ಅಷ್ಟೊತ್ತು ಕಾಯುತ್ತಿದ್ದ ರುಚಿಯಾದ ಮದುವೆಯೂಟ ಬಂದಿತು. ಊಟದ ಬಳಿಕ ಡಾನ್ಸ್ ಫ್ಲೋರ್ ಮೇಲೆ ಬಂದ ಅತಿಥಿಗಳೆಲ್ಲಾ ತಮ್ಮ ಜೊತೆಗಾರರೊಂದಿಗೆ ಸುಮಾರು ಹೊತ್ತು ಡಾನ್ಸ್ ಮಾಡಿದರು. ಇಲ್ಲಿಯ ಮದುವೆಗಳು ನವವಧು ತನ್ನ ಕೈಯಲ್ಲಿರುವ ಹೂಗುಚ್ಛ ಎಸೆಯುವ ಪದ್ಧತಿ ಇಲ್ಲದೆ ಪೂರ್ತಿಯಾಗುವುದಿಲ್ಲ . ಈ ಶಾಸ್ತ್ರದಲ್ಲಿ ವಧು ತನ್ನ ಕೈಯಲ್ಲಿರುವ ಹೂವಿನ ಗುಚ್ಛ ಎಸೆಯುತ್ತಾಳೆ. ಅದನ್ನು ಹಿಡಿಯಲು ಮದುವೆಯಾಗದ ಕುಮಾರಿಗಳು ನಿಲ್ಲುತ್ತಾರೆ. ಯಾವ ಕುಮಾರಿಗೆ ಆ ಹೂ ದೊರಕುತ್ತದೆಯೋ ಅವಳಿಗೆ ಶೀಘ್ರವೇ ಕಂಕಣ ಬಲ ಕೂಡಿಬರುವುದು ಎಂಬ ಪ್ರಾಚೀನ ನಂಬಿಕೆಯುಂಟು. ಈ ಶಾಸ್ತ್ರ ಮುಗಿದ ಮೇಲೆ ಅಂದಿನ ವೇಷಭೂಷಣ ಸ್ಪರ್ಧೆಯ ಫಲಿತಾಂಶದ ಸಮಯ. ‘ಭಯಬರಿತ-ವೇಷ’ದ ವಿಭಾಗದಲ್ಲಿ ಕಳ್ಳರ ವೇಷದಲ್ಲಿ ಬಂದ ಒಂದು ಮೆಕ್ಸಿಕನ್ ಜೋಡಿಗೆ ಬಹುಮಾನ ಕೊಟ್ಟರು. ‘ಅಂದವಾದ-ಉಡುಗೆ’ ವಿಭಾಗದಲ್ಲಿ ವಿಜೇತರ ಹೆಸರನ್ನು ಕೂಗಿದಾಗ ನಮಗೆ ಪರಮಾಶ್ಚರ್ಯವಾಯಿತು, ಏಕೆಂದರೆ ಆ ಪ್ರಶಸ್ತಿ ಬಂದಿದ್ದು ನಮಗೆ. ಭಾರತೀಯ ನಾರಿಯರ ‘ಸೀರೆ’ ಹಾಗು ಭಾರತೀಯ ಪುರುಷರ ‘ಶೆರ್‌ವಾಣಿ’ ಗಳನ್ನು ಎಲ್ಲರೂ ತುಂಬಾ ಇಷ್ಟಪಟ್ಟರು. ಮುಂದಿನ ಸಲ ಭಾರತಕ್ಕೆ ಹೋದಾಗ ನಮಗೂ ಒಂದು ಜೊತೆ ತರುವಿರಾ ? ಎಂಬ ಸುಮಾರು ಕೋರಿಕೆಗಳು ಬಂದವು. ವ್ಯಾಪಾರ ಮಾಡುವವರಿಗೆ ಒಳ್ಳೆಯ ವ್ಯಾಪಾರದ ಅವಕಾಶ ಎಂದು ನಾನು ಮನಸ್ಸಲ್ಲೇ ಅಂದುಕೊಂಡೆ.

ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ರಿಕ್ ಮತ್ತು ಜೆಸ್ ಧನ್ಯವಾದ ಹೇಳುವುದರೊಂದಿಗೆ ಮದುವೆಯ ಸಂಭ್ರಮಕ್ಕೆ ಅಂತಿಮ ತೆರೆ ಬಿದ್ದಿತು. ನಾವು ಮತ್ತೊಮ್ಮೆ ರಿಕ್-ಜೆಸ್ ದಂಪತಿಗಳಿಗೆ ಶುಭಾಶಯ ಹೇಳಿ, ‘ಮದುವೆಯ ಈ ಬಂಧ....ಅನುರಾಗದ ಅನುಬಂಧ..’ ಹಾಡನ್ನು ಗುನುಗುತ್ತಾ ನಮ್ಮ ಕಾರಿನಲ್ಲಿ ಕುಳಿತು ಮನೆಯ ಹಾದಿ ಹಿಡಿದೆವು.

1 comment:

Krishnaveera said...

Wonderful malli, such a people like is is really need to our kannada and for karnataka. stay in touch