ಬಳೆಗಾರ ಚೆನ್ನಯ್ಯ ಬೇಕಾಗಿದ್ದಾನೆ !

"ಪರದೇಶದಲ್ಲಿ ತೌರ ನೆನಪುಗಳು ಸಾಲುಸಾಲಾಗಿ ಕಾಡುತ್ತವೆ. ಅಮೆರಿಕದ ನೆಲಕ್ಕೆ ಸಹಜವಾದ ಸೋಡಾಟೀಟಿಗಳ ಕಂಡಾಗ ಬಳೆಗಾರ ಚೆನ್ನಯ್ಯ ನೆನಪಾಗುತ್ತಾನೆ. ದಂಪತಿಗಳ ಮುನಿಸು ಕಳೆವ ಈ ಸಂಧಾನಕಾರ ಚೆನ್ನಯ್ಯನ ಅಗತ್ಯದಾಂಪತ್ಯಕ್ಕಷ್ಟೇ ಅಲ್ಲ , ಏಕಾಂತದ ನೆನಪುಗಳಿಗೂ ಬೇಕು".



ಬೆಳಗ್ಗೆ ಎದ್ದು ಆಫೀಸು ತಲುಪುವುದರಲ್ಲಿ ಒಂಭತ್ತು ಗಂಟೆ ಹೊಡೆದಿರುತ್ತೆ !!! ಒಂದು ದಿವಸವಾದರೂ ನಮ್ಮ ಮ್ಯಾನೇಜರ್ ಮಾರ್ಕ್‌ಗಿಂತ ಮುಂಚೆ ಆಫೀಸು ತಲುಪಬೇಕೆಂಬ ನನ್ನ ಕನಸು ಇನ್ನೂ ಕನಸಾಗೇ ಉಳಿದಿದೆ. ಅವನು ಆಫೀಸಿಗೆ ಬರುವುದು ೬ ಗಂಟೆಗೆ, ಆ ಹೊತ್ತಿಗೆ ನಾನಿನ್ನೂ ನಿದ್ರಾದೇವತೆಯ ಸಂಪೂರ್ಣ ವಶದಲ್ಲಿರುತ್ತೇನೆ. ಸುಮಾರು ಅಮೆರಿಕನ್ನರು ಕೆಲಸಕ್ಕೆ ಮುಂಜಾನೆ ಬಹು ಬೇಗ ಬರುತ್ತಾರೆ, ಕಾರಣ ಕೆಲವರು ಟ್ರಾಫಿಕ್ ತಪ್ಪಿಸಿಕೊಳ್ಳಲು. ಇನ್ನು ಕೆಲವರು ಸಾಯಂಕಾಲ ಬೇಗ ಮನೆಗೆ ಹೋಗಿ ಹೆಂಡತಿ-ಮಕ್ಕಳೊಂದಿಗೆ ಕಾಲ ಕಳೆಯಲು. ಮಾರ್ಕ್‌ನನ್ನು ಮೊದಲ ಸಲ ನೋಡಿದಾಗ ನನಗೆ ತಟ್ಟನೇ ನನಪಿಗೆ ಬಂದದ್ದು ನಮ್ಮೂರ ಹನುಮಪ್ಪನ ಜಾತ್ರೆಯ ಕುಸ್ತಿಗೆ ಬರುತ್ತಿದ್ದ ಬಯಲು ಸೀಮೆಯ ಪೈಲ್ವಾನರು !!! ಅದೇ ದಢೂತಿ ಮೈಕಟ್ಟು, ಅದೇ ಎತ್ತರ, ಅದೇ ಠೀವಿ, ಆದರೆ ಬಣ್ಣ ಮಾತ್ರ ಕೆಂಪು. ನಲವತ್ತರ ಹರೆಯದ ಮಾರ್ಕ್ ಕೆಲಸದಲ್ಲಿ ನನ್ನ ಬಾಸ್ ಆಗಿದ್ದರೂ ಕೂಡಾ ನಡುವಳಿಕೆಯಲ್ಲಿ ಮಾತ್ರ ಆತ್ಮೀಯ ಸ್ನೇಹಿತನಂತೆ.

ಮಾರ್ಕ್ ಸುಮಾರು ಮೂರು ತಿಂಗಳ ಹಿಂದಷ್ಟೇ ಅವನ ಹೆಂಡತಿಯೊಂದಿಗೆ `ಡೈವೊರ್ಸ್' ಪಡೆದಿದ್ದಾನೆ, ಅದಕ್ಕೂ ಮುಂಚೆ ಅವನು ತನ್ನ ಹೆಂಡತಿ-ಮಕ್ಕಳ ಬಗ್ಗೆ ಸದಾ ಆಫೀಸಿನಲ್ಲಿ ಹೇಳಿಕೊಳ್ಳುತ್ತಿದ್ದ . ಇತ್ತೀಚಿಗೆ ಅವನು ತನ್ನ ಪ್ರೀತಿಯ ನಾಯಿ `ಸ್ನೊಪೀ', ಅವನ ಹೊಸ ಕನ್ವೆರ್ಟೆಬಲ್ ಕಾರು `ಬೀಮರ್' (BMW), ಅವನ ಫಿಶಿಂಗ್ ಬೋಟುಗಳ ವಿಷಯ ಬಿಟ್ಟು ಬೇರೆ ಮಾತನಾಡುವುದಿಲ್ಲ . ವಾರಕ್ಕೋ-ತಿಂಗಳಿಗೋ ಒಮ್ಮೆ ಭೇಟಿ ಮಾಡುವ ತನ್ನ ಮಕ್ಕಳ ಬಗ್ಗೆ ಕೂಡಾ ಹೇಳಿಕೊಳ್ಳುವುದು ಅಪರೂಪ.

ಮಾರ್ಕ್ ತನ್ನ ವಿವಾಹ ವಿಚ್ಛೇದನಕ್ಕೆ ಕಾರಣವನ್ನು ಆಫೀಸ್‌ನಲ್ಲಿ ಯಾರ ಹತ್ತಿರವು ಹೇಳಿಕೊಂಡಿಲ್ಲ . ಕೆಲವೊಮ್ಮೆ ನನಗೆ ಕಾರಣ ಕೇಳಬೇಕೆನಿಸಿದರೂ, ಗಂಡಂದಿರು ಹೊಡೆಯುವ ಗೊರಕೆ ಶಬ್ದಕ್ಕೆ ಬೇಸತ್ತು ಡೈವೊರ್ಸ್ ಕೊಡುವ ಹೆಂಡತಿಯರು, ಹೆಂಡತಿಯರ ಹಾಕುವ perfume ವಾಸನೆ ತಾಳಲಾರದೆ ಡೈವೊರ್ಸ್ ನೀಡುವ ಗಂಡಂದಿರು ಇರುವ ಈ ದೇಶದಲ್ಲಿ ಕಾರಣ ಕೇಳಿ ಮೂರ್ಖನಾಗುವುದಿಕ್ಕಿಂಥಾ ಸುಮ್ಮನೆ ಇರುವುದು ಒಳಿತು ಎನಿಸಿತು. ಅದು ಬೇರೆ ಈ ದೇಶದ ಪ್ರಖ್ಯಾತ ಗಾಯಕಿ `ಬ್ರಿಟ್ನೀ ಸ್ಪಿಯರ್ಸ್' ಮದುವೆಯಾಗಿ ೪೮ ಗಂಟೆಗಳ ಒಳಗೆ ಡೈವೊರ್ಸ್ ಮಾಡಿದ ಸುದ್ದಿ ನನ್ನ ನೆನಪಿನಲ್ಲಿ ಹಸಿರಾಗಿತ್ತು. ಈ ನಾಡಿಗೆ ಗಂಡ-ಹೆಂಡತಿಯರ ನಡುವೆ ಸಣ್ಣ-ಪುಟ್ಟ ಕಾರಣಗಳಿಗೆ ವೈಮನಸ್ಸು ಬಂದಾಗ ತಿದ್ದಿ-ತಿಳಿಸಿ ಹೇಳುವ ಮೈಸೂರು ಮಲ್ಲಿಗೆಯ ಬಳೆಗಾರ ಚನ್ನಯ್ಯನಂತವರು ಬೇಕು ಎಂಬುದು ನನ್ನ ಅಂಬೋಣ.

ಮಾರ್ಕ್‌ನ ಹವ್ಯಾಸಗಳು ಹಲವು. ಅದರಲ್ಲಿ ಮುಖ್ಯವಾದದ್ದು , ಮಧ್ಯರಾತ್ರಿಯಲ್ಲಿ ಅಟ್ಲಾಂಟಿಕ್ ಸಮುದ್ರದಲ್ಲಿ ಅವನ ಮೋಟಾರ್ ಬೋಟ್‌ನಲ್ಲಿ ಫಿಶಿಂಗ್ ಮಾಡುವುದು. ನಾನು ಸುಮಾರು ಸಾರಿ ಅವನೊಂದಿಗೆ ಹೊಗಿದ್ದೇನೆ. ಆದರೆ ಮೊದಲ ಸಲದ ಫಿಶಿಂಗ್ ಅನುಭವವನ್ನು ನಾನು ಇನ್ನೂ ಮರೆತಿಲ್ಲಾ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಊರಿನ ಕಾರ್ತೀಕದ ಹುಣ್ಣೀಮೆಯಲ್ಲಿ , ಹೊಂಡದಲ್ಲಿ ಒಂದು ದಿನಕ್ಕೋಸ್ಕರ ಬಿಡುವ ಮರದ ದೋಣಿಗಳನ್ನು ನೋಡಲು ವರ್ಷವೆಲ್ಲಾ ಕಾಯುತ್ತಿದ್ದೆ . ಆದರೆ ಅವುಗಳ ಮೇಲೆ ಹತ್ತಬೇಕು ಅಂತ ಎಂದೂ ಅನಿಸಿರಲಿಲ್ಲಾ . ಬಾಲ್ಯದ ಕುತೂಹಲಗಳು ತುಂಬಾ ವಿಚಿತ್ರ!!! ಕೆಲವೊಮ್ಮೆ ಅವುಗಳನ್ನು ನೆನಸಿಕೊಂಡಾಗ ನಗು ಬರುತ್ತದೆ. ಮಾರ್ಕ್ ನನ್ನನ್ನು ಮೊದಲ ಸಲ ಫಿಶಿಂಗ್‌ಗೆ ಕರೆದಾಗ ಹೋಗಿ ಬಂದರಾಯಿತು ಇದೊಂದು ಹೊಸ ಅನುಭವ ಎಂದುಕೊಂಡು ಸಜ್ಜಾದೆ. ನಮ್ಮೂರ ಹೊಂಡದಲ್ಲಿ ಮೈಮೇಲೆ ಹಾಕಿಕೊಂಡ ಅಂಗಿಯನ್ನು ಕಳಚಿ ಅದರಿಂದ ಚಿಕ್ಕ-ಚಿಕ್ಕ ಮರಿ ಮೀನುಗಳ ಹಿಡಿದ ನೆನಪು ಬಂದು, ಇಲ್ಲಿ ರಾಶಿ-ರಾಶಿ ಹಿಡಿದು ಹಾಕಬಲ್ಲೆ ಎಂದು ಕೊಂಡು ಶೂರನಂತೆ ಹೊರಟು ನಿಂತೆ.

ನಾವು ಅಟ್ಲಾಂಟಿಕ್ ಸಮುದ್ರ ಮುಟ್ಟಿದಾಗ ಮಧ್ಯರಾತ್ರಿ ೧೨ ಗಂಟೆ ಸಮಯ. ನೀವು ಕೇಳಬಹುದು ನಾವು ಹೊರಟಿದ್ದು ಮೀನು ಹಿಡಿಯಲ್ಲಿಕ್ಕೊ, ಅಥವಾ ದೆವ್ವಗಳನ್ನು ಹೀಡಿಯಲಿಕ್ಕೊ ?, ಏನು ಮಾಡುವುದು, ಮಾರ್ಕ್‌ನಿಗೆ ಮಧ್ಯರಾತ್ರಿಯಲ್ಲಿ ಮೀನು ಹಿಡಿಯುವುದೇ ಇಷ್ಟ.

ಅಂದು ತುಂಬಾ ಗಾಳಿ ಇದ್ದದ್ದರಿಂದ ಸಮುದ್ರ ದೇವತೆ ತುಂಬಾ ಸಿಟ್ಟಿನಲ್ಲಿ ಇದ್ದಂತೆ ಕಂಡು ಬಂತು. ಒಂದೇ ಸಮನೆ ನಮ್ಮ ದೋಣಿ ಅಲುಗಾಡುತಿತ್ತು . ಆದರೂ ಕೂಡಾ ನಾವಿಬ್ಬರೂ ಒಂದೊಂದು ಗಾಳ ನೀರಿನಲ್ಲಿ ಬಿಟ್ಟುಕೊಂಡು ಕುಳಿತೆವು. ಮಾರ್ಕ್ ೩-೪ ನಿಮಿಷಕ್ಕೆ ಒಂದು ಮೀನನ್ನು ಹಿಡಿಯಲು ಶುರು ಮಾಡಿದ. ಅರ್ಧ ಗಂಟೆ ಕಳೆದರೂ ಒಂದು ಮೀನು ಕೂಡಾ ನನ್ನ ಬುಟ್ಟಿಗೆ ಬೀಳಲಿಲ್ಲ. ಕೆಲವೊಮ್ಮೆ ಮೀನು ಬಂದು ನನ್ನ ಗಾಳಕ್ಕೆ ಸಿಕ್ಕಿಕೊಂಡಾಗಲೂ ಗಾಳದ ದಾರವನ್ನು ಸುತ್ತಿಕೊಳ್ಳುವುದರೊಳಗೆ ತಪ್ಪಿಸಿಕೊಂಡು ಹೋಗುತ್ತಿದ್ದವು. ಒಂದೇ ಸಮನೆ ಅಲುಗಾಡುತ್ತಿದ್ದ ಬೋಟ್‌ನಲ್ಲಿದ್ದ ನನ್ನ ತಲೆ ತಿರುಗಿದಂತಾಗಿ, ಅಷ್ಟೊತ್ತು ಕುಲುಕಾಡುತ್ತಿದ್ದ ನನ್ನ ಹೊಟ್ಟೆಯಲ್ಲಿನ ರಾತ್ರಿ ಮಾಡಿದ ಊಟ ವಾಂತಿಯ ರೂಪದಲ್ಲಿ ಸಮುದ್ರದ ಪಾಲಾಯಿತು. ಆಗ ತಾನೇ ಹಿಡಿದು ಬಿಸಾಕಿದ ಮೀನಿನಂತೆ ಚಟಪಟಿಸುತ್ತಿದ್ದ ನನ್ನನು ನೋಡಿದ ಮಾರ್ಕ್ ನಿನಗೆ sea sickness ಆಗಿದೆ ಎಂದು ಹೇಳಿ ಬೋಟ್‌ನಲ್ಲಿ ಇದ್ದ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯಲು ಹೇಳಿದ, ಅದುವರೆಗೂ ಘರ್ಜಿಸುತ್ತಿದ್ದ ಸಾಗರ ನನ್ನ ವಾಂತಿಯ ಬಲಿ ತೆಗೆದುಕೊಂಡು ಶಾಂತವಾಗತೊಡಗಿತು. ಉಯ್ಯಾಲೆಯಂತೆ ಪ್ರಶಾಂತವಾಗಿ ತೇಲುತ್ತಾ ಇರುವ ದೋಣಿಯಲ್ಲಿ ಅಂಗಾತವಾಗಿ ಮಲಗಿಕೊಂಡು ಆಕಾಶದತ್ತ ನೋಡಿದಾಗ ಹುಣ್ಣಿಮೆಯ ಚಂದ್ರ ಮತ್ತು ಸಹಸ್ರಾರು ಹೊಳೆಯುತ್ತಿರುವ ನಕ್ಷತ್ರಗಳನ್ನು ಕಂಡು ಮನಸ್ಸಿಗೆ ಒಂದು ರೀತಿಯ ಆನಂದವಾಯಿತು. ನಮ್ಮ ಊರಿನ ಮನೆಯ ಮಾಳಿಗೆಯ ಮೇಲೆ ಬೆಳದಿಂಗಳ ಬೆಳಕಿನ ಊಟ ಮಾಡಿ ಆಕಾಶದತ್ತಾ ನೋಡುತ್ತಾ ಮಲಗಿಕೊಳ್ಳುತ್ತಿದ್ದ ಬಾಲ್ಯದ ದಿನಗಳ ಸುಖ ಮರುಕಳಿಸಿದ ಅನುಭವವಾಯಿತು. ಮಾರ್ಕ್ ಮಾತ್ರ ಮೀನುಗಳನ್ನು ಹಿಡಿದು ಹಿಡಿದು ತನ್ನ ಬುಟ್ಟಿ ತುಂಬಿಸಿಕೊಳ್ಳುತ್ತಿದ್ದ. ನನಗೆ ಆ ಮೀನುಗಳಿಂದ ತುಂಬಿದ ಬುಟ್ಟಿ ನೋಡಿ ನಮ್ಮ ಊರಿನಲ್ಲಿ ಬಾಂಗ್ಡೇ-ಮೀನು ಮಾರುತ್ತಿದ್ದ ನನ್ನ ಗೆಳೆಯ ಜಮಾಲಸಾಬನ ನೆನಪು ಬಂತು.

ಹೀಗೆ ಸುಖ-ಸಂಪತ್ತಿನ ಸೆಳಕಲ್ಲಿ ಸಪ್ತಸಾಗರ ದಾಟಿ ಹುಟ್ಟೂರು ಬಿಟ್ಟು ಬಂದು ಪ್ರತಿ ಘಳಿಗೆಯಲ್ಲೂ ಒಂದಲ್ಲಾ ಒಂದು ವಿಷಯಕ್ಕೆ ನನ್ನೂರು, ಮಣ್ಣು, ನೀರು, ನನ್ನ ಬಾಲ್ಯ, ನನ್ನ ಜನ , ನನ್ನ ಸಮಾಜ, ನನ್ನ ಸಂಸ್ಕೃತಿ...... ಮುಂತಾದವುಗಳನ್ನು ನೆನಪಿಸಿಕೊಳ್ಳುವುದು ವಿದೇಶದಲ್ಲಿನ ಪ್ರತಿಯೊಬ್ಬ ದೇಶಿಯನ ಅನಿವಾರ್ಯವಾದ ಅಗತ್ಯ ಎಂಬುದು ನನ್ನ ಅನಿಸಿಕೆ. ಏನಂತೀರಿ ?

No comments: