ಹಲೋ, ಹೇಗಿದ್ದೀಯಾ ಉಪ್ಪಿ ದಾದ?!


ಸ್ಯಾಂಡಲ್‌ವುಡ್‌ನ ವೇಗದ ನಟ, ನಿರ್ದೇಶಕ ಉಪೇಂದ್ರ ಅಂದ್ರೆ, ಪಡ್ಡೆಗಳಂತೂ ಹುಚ್ಚೆದ್ದು ಕುಣಿಯುತ್ತಾರೆ! ಈಗ ಟ್ರ್ಯಾಕ್ ಬದಲಿಸಿ, ತಮ್ಮ ಅಭಿಮಾನಿ ಪ್ರೇಕ್ಷಕರ ಗುಂಪಿಗೆ ಮಹಿಳೆಯರನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ! ಹುಟ್ಟು ಹಬ್ಬದ ಖುಷಿಯಲ್ಲಿರುವ ಉಪ್ಪಿಗೆ, ಅವರ ಅಭಿಮಾನಿಯೊಬ್ಬರು ಪತ್ರ ಬರೆದಿದ್ದಾರೆ ....

ಹೇಗಿದ್ದೀಯಾ ಗುರು ? ನಾನು ನಿನ್ನ ಅಭಿಮಾನಿ। ಆದರೆ ಅಭಿಮಾನಿ ದೇವರಲ್ಲಾ, ತುಂಬಾ ದಿವಸದಿಂದ ನಿನಗೆ ಒಂದು ಪತ್ರ ಬರೆಯೋಣ ಅಂದು ಕೊಂಡಿದ್ದೆ, ಅದಕ್ಕೆ ಟೈಮು ಈಗ ಕೂಡಿ ಬಂತು ನೋಡು ಗುರು. ನಿನ್ನ ‘ಗೌರಮ್ಮ’ ಸೂಪರ್ ಹಿಟ್ ಆಗಿದೆ ಅಂತ ಗೊತ್ತಾಯ್ತು... ತುಂಬಾ ಕಂಗ್ರ್ಯಾಜ್ಯೂಲೇಷನ್. ಏನ್ ಗುರೂ ನೀನು ‘ಓಂ’ ಚಿತ್ರ ಮಾಡಿದ್ದೆ ತಡ, ಎಲ್ಲರೂ ಅದೇ ಥರಾ ಚಿತ್ರ ಮಾಡೋಕೆ ಶುರು ಹಚ್‌ಕೊಂಡು ಬಿಟ್ಟಾವ್ರೇ, ಇರೋ ಬರೋ ಹೀರೋಗಳ ಕೈಯಲ್ಲಿ ಲಾಂಗು-ಮಚ್ಚು ನೋಡಿ ನೋಡಿ ಜನಗಳಿಗೆ ಹುಚ್ಚು ಹಿಡಿಯೋದೊಂದು ಬಾಕಿ ಇದೆ ನೋಡು.

ಕಾಶೀನಾಥ್‌ರ ಶಿಷ್ಯನಾದ ನೀನು ‘ತರ್‍ಲೆ ನನ್ಮಗ’ ಎಂಬ ತರಲೆ ಚಿತ್ರ ಮಾಡಿ ಕನ್ನಡ ಪೋಲಿ ಶಬ್ಧಕೋಶಕ್ಕೆ ಅಪಾರ ಕೊಡುಗೆ ನೀಡಿದ್ದು ಅಲ್ಲದೆ, ಸೈಡ್ ರೋಲ್ ಮಾಡ್ತಾ ಇದ್ದ ಜಗ್ಗೇಶ್‌ನನ್ನು ಲೀಡ್ ರೋಲ್‌ಗೆ ಬಡ್ತಿಮಾಡಿದರೂ ಕೂಡಾ, ಮುಂದೆ ಇದೇ ಜಗ್ಗೇಶ್ ನಿನ್ನ ‘ಉಪೇ೦ದ್ರ’ ಚಿತ್ರಕ್ಕೆ ಸವಾಲ್ ಹಾಕಿ ಕರಾಬು ಚಿತ್ರ ‘ಜಿತೇಂದ್ರ’ ಯಾಕೆ ಮಾಡ್ದಾ ಅಂತಾ ಅರ್ಥ ಆಗ್ಲಿಲ್ಲಾ ಗುರು ? ನಿನ್ನ ಮತ್ತು ಅವ್ನ ನಡುವೆ ಏನ್ ಕಿರಿಕ್ಕು ಆಯ್ತು ಉಪ್ಪಿ?।

ಮೊನ್ನೆ ವಿಸಿಡಿನಲ್ಲಿ ‘ಅನಂತನ ಅವಾಂತರ’ ನೋಡ್ತಾ ಇದ್ದೆ ಗುರು, ಆ ಚಿತ್ರದಲ್ಲಿ ಕಾಮಣ್ಣನ ಪಾತ್ರದಲ್ಲಿ ನಿನ್ನ ನೋಡಿ ನನಗೆ ಸಖ್ಖತ್ ನಗು ಬಂತು, ಆಗ ನರಪೇತಲು ನಾರಾಯಣನ ಥರಾ ಇದ್ದ ನೀನು ಈಗ ಓಳ್ಳೆ ಬಾಡಿ ಬಿಲ್ಡ್ ಮಾಡಿದ್ದೀಯಾ ... ವೆರಿಗುಡ್ ಕೀಪಿಟಪ್!।

ನೀನು ಡೈರಕ್ಟ್ ಮಾಡಿದ ನಿನ್ನ ಎರಡನೇ ಪಿಕ್ಚರ್ ‘ಶ್’ ಮಾತ್ರ ಬೊಂಬಾಟಾಗಿತ್ತು ನೋಡು ಗುರೂ, ಕನ್ನಡದಲ್ಲಿ ಆ ಥರಾ ಸಸ್ಪೆನ್ಸ್ ಥ್ರಿಲ್ಲರ್ ಮತ್ತೆ ಬಂದಿಲ್ಲಾ, ನಿನ್ನ ಗುರು ಕಾಶೀನಾಥ್ ಮಾಡಿದ ‘ಅಪರಚಿತ’ ಕೂಡಾ ಅದೇ ಥರಾ ಒಂದು ಒಳ್ಳೆ ಸಿನಿಮಾ, ಮುಂದೆ ಟೈಮ್ ಸಿಕ್ಕರೆ ದಯವಿಟ್ಟು ಇನ್ನೊಂದು ಥ್ರಿಲ್ಲರ್ ಪಿಕ್ಚರ್ ಡೈರಕ್ಟ್ ಮಾಡು। ಒಂದೇ ಒಂದು ಅಕ್ಷರ ಇರೋ ಸಿನಿಮಾ ಟೈಟಲ್ ಇಡೋ ಐಡಿಯಾ ಎಲ್ಲಿಂದ ನಿನಗೆ ಬಂತು ಉಪ್ಪಿ?.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹ್ಯಾಟ್ರಿಕ್ ಹೊಡೆದ ಮೇಲೆ ಸಾಲು ಸಾಲಾಗಿ ಸೋತ ಚಿತ್ರಗಳಿಂದ ಟ್ರ್ಯಾಕ್ ಕಳೆದು ಕೊಂಡಾಗ ರಿಯಲ್ ರೌಡಿಸಂ ಟ್ರಿಕ್ ಉಪಯೋಗಿಸಿ ಶಿವರಾಜ್ ಅಭಿಮಾನಿಗಳನ್ನು ಅಟ್ರ್ಯಾಕ್ಟ್ ಮಾಡಿ ಶಿವಣ್ಣನನ್ನು ಆಫ್ ಟ್ರ್ಯಾಕ್‌ನಿಂದ ಮರಳಿ ಟ್ರ್ಯಾಕ್‌ಗೆ ತಂದ ಅದ್ಭುತವಾದ ಚಿತ್ರವೇ ‘ಓಂ’। ‘ಓಂ’ ಬಗ್ಗೆ ಎಷ್ಟು ಹೇಳಿ ಹೊಗಳಿದರೂ ಕಡಿಮೆ ನೋಡು ದೊರೆ, ಸೀದಾ ಸಾದಾ ಬಡ ಬ್ರಾಹ್ಮಣರ ಹುಡುಗ ರೌಡಿ ಆಗೋ ಚಿತ್ರದಲ್ಲಿ ನಿಜ ಜೀವನದ ರೌಡಿಗಳನ್ನೆ ಹಾಕಿಕೊಂಡು ಚಿತ್ರ ಮಾಡುವಂತ ಧೈರ್ಯ ಮತ್ತು ಐಡಿಯಾ ನಿನಗೆ ಎಲ್ಲಿಂದ ಬಂತು ? ಅವತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಹಿಡಿದ ಈ ಮಚ್ಚು ಲಾಂಗಿನ ಹುಚ್ಚು ಇನ್ನು ಬಿಟ್ಟಿಲ್ಲಾ ನೋಡು. ಹೀರೊನ ಕೈಯಲ್ಲಿ ಫಳ ಫಳಾಂತ ಮಿಂಚಿದರೆ ಮಚ್ಚು! ಬಾಕ್ಸ್ ಆಫೀಸಿನಲ್ಲಿ ಆವಾಗಲೇ ಗಳಿಕೆ ಹೆಚ್ಚು !! ಇದಕ್ಕೆಲ್ಲಾ ನಿನ್ನ ‘ಓಂ’ ತಾನೇ ಹಚ್ಚಿದ್ದು ಕಿಚ್ಚು!!!.

ರೌಡಿಸಂ ಚಿತ್ರಗಳಿಗೆ ‘ಓಂ’ ನಿಂದ ಓಂಕಾರ ಹಾಡಿದ ನೀನು ‘ಓಂಕಾರ"ದಂಥ ಡಬ್ಬಾ ಚಿತ್ರ ಮಾತ್ರ ಮಾಡಬಾರದಿತ್ತು ನೋಡು ಶಿವಾ!। ಈ ಥರಾ ಹೇಳ್ತಿನಿ ಅಂತಾ ಬೇಜಾರು ಮಾಡ್ಕೋ ಬ್ಯಾಡಾ, ನೀನೇ ಹೇಳುವ ಹಾಗೆ ನನಗೆ ಮನಸ್ಸು ಮತ್ತು ಬಾಯಿ ನಡುವೆ ಫಿಲ್ಟರ್ ಇಲ್ಲದೆ ಹೇಳ್ತಾ ಇದ್ದೀನಿ.

ಆಮೇಲೆ ಬಂದ ನಿನ್ನ ಎರಡು ಚಿತ್ರಗಳ ಬಗ್ಗೆ ಮಾತನಾಡುವುದೇ ಬೇಡ ಎನಿಸಿದರೂ, ನಿನ್ನ ಅಭಿಮಾನಿಯಾಗಿ ಅವುಗಳ ಬಗ್ಗೆ ಹೇಳುವುದು ನನ್ನ ಕರ್ತವ್ಯ ಎಂಬುದು ನನ್ನ ಅನಿಸಿಕೆ। ನಾನು ಮಾತಾಡ್ತಾ ಇರೋದು ‘ಅಪರೇಷನ್ ಅಂತ’ ಮತ್ತು ‘ ಸ್ವಸ್ತಿಕ್’ ಚಿತ್ರಗಳ ಬಗ್ಗೆ, ಆಗ ಅಲ್ಪ ಸಲ್ಪ ಬೇಡಿಕೆಯಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ‘ ಸ್ವಸ್ತಿಕ್’ ನಿಂದ ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದರಲ್ಲಿ ನಿನ್ನ ಪಾಲು ಸಹ ಇದೆ ಎಂಬುದು ನೆನಪಿರಲಿ, ಅಷ್ಟು ಬುದ್ಧಿವಂತನಾದ ನೀನು ಇಂತಹ ಕೆಟ್ಟ ಚಿತ್ರಗಳಿಗೆ ಏಕೆ ಕೈ ಹಾಕಿದೆ ಅಂತ ನನಗೆ ಅರ್ಥ ಆಗಲಿಲ್ಲ ಉಪ್ಪಿದಾದಾ. ಇವೆರಡು ಚಿತ್ರಗಳು ನೆಲಕಚ್ಚಿದ್ದೆ ತಡಾ ನೋಡು ಗಾಂನಗರದಲ್ಲಿ ನಿನ್ನ ಬೇಡಿಕೆ ಕೂಡಾ ಪಾತಾಳ ಸೇರಿತು, ಆಗ ಛಲ ಬಿಡದ ತ್ರಿವಿಕ್ರಮನಂತೆ ನೀನೇ ಹೀರೋ ಆಗಿ ಡೈರಕ್ಟ್ ಮಾಡಿದ ‘ಎ’ ಮಾತ್ರ ನಿನ್ನ ಜೀವನದ ಮೈಲಿಗಲ್ಲು ಅಂದ್ರೆ ತಪ್ಪಾಗಲಾರದು. ಕೆಲವರ ಪ್ರಕಾರ ಈ ಚಿತ್ರಕಥೆ ನಿನ್ನ ಜೀವನದ ನಿಜ ಪ್ರೇಮ(ಳ)ಕಥೆ ಅಂಥಾ ಸುದ್ದಿ. ಅದು ನಿಜಾನಾ ಗುರು?, ‘ಎ’ ಚಿತ್ರದ ಕ್ಲೈಮ್ಯಾಕ್ಸ್ ಸೂಪರ್ ಆಗಿದೆ ನೋಡಪ್ಪ, ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಟಾರ್ ಮತ್ತು ಒಬ್ಬ ಹಿಟ್ ಮ್ಯೂಸಿಕ್ ಡೈರಕ್ಟರ್ (ಗುರುಕಿರಣ್) ಸಿಕ್ಕಿದ್ದು ಈ ಚಿತ್ರದಿಂದ. ‘ ಬುದ್ದಿವಂತರಿಗೆ ಮಾತ್ರ’ ಎಂಬ ಶೀರ್ಷಿಕೆಯೊಂದಿಗೆ ಬಂದ ಈ ಚಿತ್ರ ಚಿತ್ರರಂಗದಲ್ಲಿ ಕೋಲಾಹಲ ಮಾಡಿದ್ದು ಈಗ ಇತಿಹಾಸ.

ಇದಾದ ಮೇಲೆ ಬಂದ ಬಹುನಿರೀಕ್ಷಿತ ಚಿತ್ರ ‘ಉಪೇಂದ್ರ’, ಎಲ್ಲರೂ ನಿನ್ನನ್ನು ಕೇಳಿದರು ಚಿತ್ರಕ್ಕೆ ನಿನ್ನ ಹೆಸರನ್ನೇ ಏಕೆ ಇಟ್ಟು ಕೊಂಡೆ? ಅದಕ್ಕೆ ನಿನ್ನ ಉತ್ತರ ‘ಚಿತ್ರದ ಟೈಟಲ್‌ನಲ್ಲಿ ಇರೋದು ನನ್ನ ಹೆಸರಲ್ಲಾ, ಚಿತ್ರದಲ್ಲಿರುವ ಹೀರೋ ಮತ್ತು ಹೀರೊಯಿನ್‌ಗಳ ಹೆಸರಿನ ಮೊದಲಕ್ಷರಗಳ ಜೋಡಣೆ’(ಉ-ಉಪ್ಪಿ, ಪೇ-ಪ್ರೇಮಾ, ದ್ರ-ದ-ದಾಮಿನಿ, ರ-ರವೀನಾ), ಬುದ್ಧಿವಂತ ಕಣಯ್ಯಾ ನೀನು. ಈ ಚಿತ್ರದಲ್ಲಿ ನಿನ್ನ ವೇಷಭೂಷಣ ನೋಡಿ ಗಾಂನಗರ ನಿನಗೆ ‘ಹುಚ್ಚ’ ಎಂಬ ಪಟ್ಟ ಕಟ್ಟಿತು, ಆ ಚಿತ್ರದಲ್ಲಿ ನಿನ್ನ ಶೇವಿಂಗ್ ಮಾಡಿದ ಸ್ಟೈಲ್ ಮಾತ್ರ ‘ಬ್ಯಾಕ್‌ಸ್ಟ್ರೀಟ್ ಬಾಯ್ಸ್’ಎಂಬ ಪಾಪ್ ಬ್ಯಾಂಡಿನ ಗಾಯಕ ‘ಎ. ಜೆ. ಮೆಕ್ಲಿನ್’ ನಿಂದ ಕಾಫಿ ಹೊಡೆದದ್ದು ತಾನೆ?.
‘ಉಪೇಂದ್ರ’ ಚಿತ್ರದಲ್ಲಿ ಹೆಂಗಸರನ್ನು ಬೈಯುವ ಮತ್ತು ಗೋಳುಹೊಯ್ದು ಕೂಳ್ಳುವ ಸೀನ್‌ಗಳನ್ನು ಬಿಟ್ಟು ಉಳಿದಂತೆ ಚಿತ್ರ ಚೆನ್ನಾಗಿ ಇತ್ತು, ಹೆಸರಿಗೆ ತಕ್ಕಂತೆ ಚಿತ್ರ ಉಪೇಂದ್ರಮಯವಾಗಿದ್ದುದಕ್ಕೆ ಸೂಪರ್ ಹಿಟ್ ಆಯಿತು.
ಇದಾದ ಮೇಲೆ ನೀನು ಕೈ ಹಾಕಿ ಸುಟ್ಟುಕೊಂಡ ದೊಡ್ಡ ಪ್ರಮಾಣದ ಚಿತ್ರ ‘ಎಚ್‌ಟು‌ಒ’. ನನಗೆ ಗೊತ್ತು ಗುರು, ಇದು ನಿನ್ನ ಕನಸಿನ ಚಿತ್ರ, ತುಂಬಾ ಶ್ರಮ ಮತ್ತು ಟೈಮ್ ಖರ್ಚು ಮಾಡಿ ಈ ಚಿತ್ರ ಮಾಡಿದ್ದಕ್ಕೆ ನೀನು ಹಲವಾರು ವಿವಾದಗಳಿಗೆ ಗುರಿಯಾಗ ಬೇಕಾಯ್ತು. ಹೋಗಲಿ ಬಿಡು ಉಪ್ಪಿ ಈ ಚಿತ್ರದಿಂದ ಒಂದಾದರೂ ಒಳ್ಳೆ ಕಾರ್ಯ ಆಯ್ತಲ್ಲಾ, ಈ ಚಿತ್ರದಿಂದ ತಾನೇ ನಿನಗೆ ನಿನ್ನ ಬಾಳ ಸಂಗಾತಿ ಪ್ರಿಯಾಂಕಳ ಜೊತೆ ಪ್ರೇಮಾಂಕುರವಾಗಿದ್ದು ?. ‘ಉಪೇಂದ್ರ’ ಚಿತ್ರದಿಂದ ನಿನ್ನ ಮೇಲೆ ಕೋಪ ಮಾಡಿಕೊಂಡಿದ್ದ ಹೆಂಗಸರು ‘ಎಚ್‌ಟು‌ಒ’ ಚಿತ್ರದಲ್ಲಿ ಇರೋ ನೀನು ಬರೆದಿರೋ ಸೂಪರ್ ಹಿಟ್ ಹಾಡು ‘ ಹೂವೇ... ಹೂವೇ...’ ಕೇಳಿದ ತಕ್ಷಣ ಅವರೆಲ್ಲರ ಕೋಪ ಕರಗಿ ಹೋಗಿದ್ದು ನಿಜವೇ?. ಈ ವಿವಾದಗಳಿಂದ ಅಷ್ಟೋಂದು ಬೇಜಾರಾದ ನೀನು ಚಿತ್ರ ನಿರ್ದೇಶನ ಮಾಡೋದನ್ನೆ ನಿಲ್ಲಿಸಬೇಕಾಯ್ತು ಎಂಬುದು ಎಷ್ಟರ ಮಟ್ಟಿಗೆ ನಿಜ ?.
ಇದಾದ ಮೇಲೆ ನೀನು ನಟಿಸಿದ ಸಿಕ್ಕಾಪಟ್ಟೆ ರೀಮೇಕ್ ಚಿತ್ರಗಳಲ್ಲಿ ‘ಪ್ರೀತ್ಸೆ’ ಮತ್ತು ‘ ಕುಟುಂಬ’ ಬಿಟ್ರೇ ಬೇರಾವ ಚಿತ್ರಗಳು ಹೇಳೋಕೆ ಹೆಸರಿಲ್ಲದಂತೆ ತೋಪು ಹೊಡೆದು ಹೋದವಲ್ಲಾ ಶಿವಾ, ಹೋಗಲಿ ಬಿಡು ಚೆನ್ನಾಗಿ ದುಡ್ಡಾದರು ಮಾಡ್ಕೊಂಡಿ ತಾನೆ?, ಆಮೇಲೆ ನೀನು ಮಾಡಿದ ನಿನ್ನ ಡೈಲಾಗ್ ಬರಿತ ‘ರಕ್ತ ಕಣೀರು’ ಹಿಟ್ ಆಗಿದ್ದರಲ್ಲಿ ಆಶ್ಚರ್ಯವೇನಿಲ್ಲ, ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ ಅದೇನೆಂದರೆ ನಿನ್ನ ನಿಜವಾದ ಕಲೆ ಇರೋದು ನಿನ್ನ ನಿರ್ದೇಶನ ಮತ್ತು ಸಿನಿಮಾ ಸಾಹಿತ್ಯದಲ್ಲಿ. ಇತ್ತೀಚೆಗೆ ಬಂದ ‘ಓಂಕಾರ’, ‘ನ್ಯೂಸ್’, ‘ಆಟೋ ಶಂಕರ್’ಚಿತ್ರಗಳಲ್ಲಿ ನಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದೀಯಾ ಎಂಬುದನ್ನು ಓದಿದೆ, ಸಂತೋಷ.
ಒಂದಲ್ಲ ಒಂದು ದಿನ ಮತ್ತೆ ನೀನು ನಿರ್ದೇಶನದತ್ತ ಮರಳಿ, ಕನ್ನಡ ಚಿತ್ರರಂಗವನ್ನು ಪ್ರಜ್ವಲಗೊಳಿಸುವೆ ಎಂದು ಎದುರು ನೋಡುತ್ತಿರುವ ನಿನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಬೇಡ। ನಿನ್ನ ಖಾಸಗಿ ಜೀವನದ ಬಗ್ಗೆ ಕೆಟ್ಟದಾಗಿ ಬರೆದ ಪತ್ರಿಕೆಗಳ ಬಗ್ಗೆ ಮಾಡಿಕೊಳ್ಳಬೇಡ ಗುರು ನೀನು ಟೆನ್ಷನ್! ಈ ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಪ್ರಿಂಟಾಗುವ ಪತ್ರಿಕೆಗಳಿಗೆ ನೀನೇ ಅಲ್ವಾ ರೇಷನ್!!.

ಹೇಗಿದ್ದಾನೆ ನಮ್ಮ ಜೂನಿಯರ್ ಉಪ್ಪಿ ! ಅವನಿಗೆ ತಿಳಿಸು ನನ್ನ ಪ್ರೀತಿಯ ಪಪ್ಪಿ !!. ಕೊನೆಯದಾಗಿ ನಿನಗೆ ಹೃದಯಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳು ಸ್ವಲ್ಪ ತಡವಾಗಿ. ನೂರಾರು ವರ್ಷ ಸುಖವಾಗಿ ಬಾಳು. ಯಾವಾಗಲಾದರು ನ್ಯೂಯಾರ್ಕ್‌ಗೆ ಬಂದರೆ ದಯವಿಟ್ಟು ನಮ್ಮ ಮನೆಗೆ ಒಂದು ಸಲ ಭೇಟಿಕೊಡು.
-ಅಕ್ಕರೆಯೊಂದಿಗೆ ನಿನ್ನ ಅಭಿಮಾನಿ.

No comments: